ADVERTISEMENT

ಅಂಬಾರಗೋಡ್ಲು-ಕಳಸವಳ್ಳಿ ನೂತನ ಸೇತುವೆ ಲೋಕಾರ್ಪಣೆ ಜು.14ಕ್ಕೆ: ಬಿ.ವೈ.ರಾಘವೇಂದ್ರ

ಸೇತುವೆಗೆ ಸಿಗಂದೂರು ಶ್ರೀ ಚೌಡೇಶ್ವರಿ ಹೆಸರಿಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 7:52 IST
Last Updated 5 ಜುಲೈ 2025, 7:52 IST
   

ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ನೂತನ ತೂಗು ಸೇತುವೆಯನ್ನು ಜುಲೈ 14 ರಂದು ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹473 ಕೋಟಿ ವೆಚ್ಚದಲ್ಲಿ 2.44 ಕಿ.ಮೀ ಉದ್ದ ನಿರ್ಮಿಸಿರುವ ಇದು ದೇಶದಲ್ಲಿಯೇ ಎರಡನೇ ಅತಿ ದೊಡ್ಡ ತೂಗು ಸೇತುವೆ ಎಂದರು.

ಮಲೆನಾಡಿನ ಪ್ರಮುಖ ಯಾತ್ರಾ ಸ್ಥಳ ಸಿಗಂದೂರಿಗೆ ಈ ಸೇತುವೆ ಸಂಪರ್ಕ ಕಲ್ಪಿಸುವ ಕಾರಣಕ್ಕೆ 'ಸಿಗಂದೂರು ಶ್ರೀ ಚೌಡೇಶ್ವರಿ ಸೇತುವೆ' ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಆ ಬಗ್ಗೆ ಎನ್ ಒಸಿ ಕೊಟ್ಟು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಿ ಎಂದು ಒತ್ತಾಯಿಸಿದರು.

ADVERTISEMENT

'ಸೇತುವೆ ನಿರ್ಮಾಣಕ್ಕೆ ಪಕ್ಷಾತೀತವಾಗಿ ಹೋರಾಟಗಳು ನಡೆದಿವೆ. ಆದರೆ ಅದರ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಡುಗೆ ಮಹತ್ವದ್ದು. ಆರಂಭದಲ್ಲಿ ಈ ಕಾರ್ಯಕ್ಕೆ ಯಡಿಯೂರಪ್ಪ ₹100 ಕೊಟ್ಟಿದ್ದರು. ಜೊತೆಗೆ ಸೇತುವೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಹಣವನ್ನು ಮಧ್ಯದಲ್ಲಿ ಬೇರೆ ಕಡೆ ವಿನಿಯೋಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆ ವೇಳೆ ನಿತಿನ್ ಗಡ್ಕರಿ ಅವರಿಗೆ ದುಂಬಾಲು ಬಿದ್ದು ಆ ಹಣವನ್ನು ವಾಪಸ್ ತರಿಸುವಲ್ಲಿ ಯಡಿಯೂರಪ್ಪ ಶ್ರಮ ಹಾಕಿದ್ದರು' ಎಂದು ಸ್ಮರಿಸಿದರು.

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸ್ಥಳ ಹಾಗೂ ಸಮಯ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದರು.

ಸೇತುವೆಯ ಎರಡನೇ ಹಂತದ ಲೋಡ್ ಟೆಸ್ಟ್ ಶನಿವಾರ ಆರಂಭವಾಗಿದೆ. ಕೊನೆಯ ಹಂತದಲ್ಲಿ ಸಣ್ಣ ಪುಟ್ಟ ಕೆಲಸ ಕಾರ್ಯ ಬಾಕಿ ಇದ್ದು, ಶೀಘ್ರ ಮುಗಿಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಅಶೋಕ ನಾಯ್ಕ, ಮುಖಂಡ ಎಸ್.ದತ್ತಾತ್ರಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.