ADVERTISEMENT

ಸಿಗಂದೂರು: ಜ.14,15ರಂದು ಚೌಡೇಶ್ವರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:45 IST
Last Updated 11 ಜನವರಿ 2024, 16:45 IST
ಸಿಗಂದೂರು ಚೌಡೇಶ್ವರಿ
ಸಿಗಂದೂರು ಚೌಡೇಶ್ವರಿ   

ಶಿವಮೊಗ್ಗ: ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ಜ.14ರಂದು ಬೆಳಿಗ್ಗೆ 4 ಗಂಟೆಗೆ ಮಹಾಭಿಷೇಕ, ಅಲಂಕಾರ, ಆಭರಣ ಪೂಜೆ, ಚಂಡಿಕಾ ಹೋಮ ನೆರವೇರಲಿದೆ. ದೇವಸ್ಥಾನದ ಧರ್ಮದರ್ಶಿ ಎಸ್.ರಾಮಪ್ಪ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆರ್ಯ ಈಡಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ತಿಮ್ಮೇಗೌಡ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ರಥ ಪೂಜೆಯೊಂದಿಗೆ ದೇವಿಯು ಮೂಲ ಸ್ಥಾನಕ್ಕೆ ಹೊರಡಲಿದ್ದು, ಕೇರಳದ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಪೀಠಾಧಿಪತಿ ಸಚ್ಚಿದಾನಂದ ಸ್ವಾಮೀಜಿಯವರು ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿಗೆ ಚಾಲನೆ ನೀಡಲಿದ್ದಾರೆ. ರಂಭಾಪುರಿ ಮಳಲಿಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅದೇ ದಿನ ರಾತ್ರಿ 9.30ಕ್ಕೆ ಸಿಗಂದೂರು ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ADVERTISEMENT

15ರ ಬೆಳಿಗ್ಗೆ 5ರಿಂದ ನವ ಚಂಡಿಕಾ ಹೋಮ, ರಾತ್ರಿ 8 ಗಂಟೆಗೆ ದುರ್ಗಾ ದೀಪ ನಮಸ್ಕಾರ, ಗುರು ಪೂಜೆ, ದೇವಿ ಪಾರಾಯಣ, ರಂಗಪೂಜೆ, ರಾತ್ರಿ 8.30ರಿಂದ ಕುದ್ರೋಳಿ ಗಣೇಶ ಮತ್ತು ಬಳಗದಿಂದ ಮ್ಯಾಜಿಕ್ ಶೋ ನಡೆಯಲಿದೆ. ಜಾತ್ರೆಯ ಅಂಗವಾಗಿ 2 ದಿನಗಳವರೆಗೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.