ಸುಕುಮಾರ್ ಎಂ
ತುಮರಿ: ಪ್ರಕೃತಿ ಮಾತೆಯ ಶಕ್ತಿರೂಪವನ್ನು ಆರಾಧಿಸುವ ಪರ್ವ ಕಾಲ ನವರಾತ್ರಿ. ಈ ಉತ್ಸವಕ್ಕೆ ಮಲೆನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸಜ್ಜಾಗಿದೆ.
ಸೆ.22ರಿಂದ ಅ. 2ರ ವರೆಗೆ ದಸರಾ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನಾಡಿನ ಭಕ್ತಿ ಮತ್ತು ಶ್ರದ್ಧಾ ಕೇಂದ್ರವಾದ ಸಿಗಂದೂರಿನಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಘಟಸ್ಥಾಪನೆಯಿಂದ ಪ್ರಾರಂಭವಾಗಿ ವಿಜಯದಶಮಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ದಸರಾ ಉತ್ಸವದಲ್ಲಿ ಪ್ರತಿನಿತ್ಯ ಚಂಡಿಕಾ ಹವನ, ನವಚಂಡಿಕಾ ಹೋಮ, ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ. ವಿಜಯದಶಮಿ ದಿನದಂದು ಕೋರಿಕೆ ಸಲ್ಲಿಸಿ ಶುಭ ಕಾರ್ಯಗಳನ್ನು ಆರಂಭಿಸಿದರೆ ದೇವಿಯ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಭಕ್ತರದ್ದು.
ಈಗಾಗಲೇ ದೇವಿಯ ಸನ್ನಿಧಾನ ವಿವಿಧ ಫಲ–ಪುಷ್ಪಗಳಿಂದ ಶೃಂಗಾರಗೊಂಡಿದೆ. ದೇವಿಯ ಗರ್ಭಗುಡಿ, ಹೊರಾಂಗಣಕ್ಕೆ ಸಾವಿರಾರು ಹೂಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ತಳಿರು ತೋರಣದಿಂದ ಸಿಂಗರಿಸಲಾಗಿದೆ. ವನದೇವಿ ಚೌಡಿ, ದುರ್ಗೆ, ಅಂಬಿಕೆ, ಚಂಡಿಕೆ, ಲಕ್ಷ್ಮೀ, ಸರಸ್ವತಿ ಹೀಗೆ ನಾನಾ ರೂಪಧಾರಿಣಿಯಾಗಿ ಪ್ರತ್ಯಕ್ಷಳಾಗುವ ಮೂಲಕ ಮನೆ–ಮನಗಳಲ್ಲಿ ಜ್ಞಾನದ ಬೆಳಕು ಮೂಡಿಸುತ್ತಾಳೆ. ಬೇಡಿದ ವರ ಕರುಣಿಸುತ್ತಾ, ಶಿಷ್ಟರನ್ನು ರಕ್ಷಿಸುವಳು ಎಂಬ ನಂಬಿಕೆ ಭಕ್ತರದ್ದು. ಮಹಿಳೆಯರು ನವರಾತ್ರಿ ವೇಳೆ ದೇವಿಗೆ ಪ್ರಿಯವಾದ ಉಡಿ ಸೇವೆ ಸಮರ್ಪಿಸುವುದು ಇಲ್ಲಿನ ವಿಶೇಷ.
ವಿವಿಧ ಧಾರ್ಮಿಕ ಕಾರ್ಯಕ್ರಮ:
ನವರಾತ್ರಿ ಉತ್ಸವದ ಪ್ರಯುಕ್ತ ದೇವಿಗೆ ಬೆಳಿಗ್ಗೆ ತೈಲಾಭಿಷೇಕ, ಶೈಲಪುತ್ರಿ ಆರಾಧನೆ, ಶುದ್ಧಿ ಪುಣ್ಯಾಹ, ಗಣಹೋಮ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಹವನ, ಚಂಡಿಕಾ ಹೋಮ, ನವಚಂಡಿಕಾ ಹೋಮ, ಗುರುಗಳ ಆರಾಧನೆ ನಡೆಯಲಿದೆ. ಧರ್ಮಾಧಿಕಾರಿ ಎಸ್. ರಾಮಪ್ಪನವರ ನೇತೃತ್ವದಲ್ಲಿ ಪ್ರತಿನಿತ್ಯ ಮಧ್ಯಾಹ್ನ ನೈವೇದ್ಯ, ರಾತ್ರಿ ದೀಪೋತ್ಸವ, ಅಷ್ಟಾವಧಾನ ಸೇವೆಗಳು ಜರುಗಲಿವೆ.
ಸಿಗಂದೂರು ದಸರಾ ಉದ್ಘಾಟನೆ
ಸಿಗಂದೂರು ದಸರಾ ಉತ್ಸವಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸೆ.22ರಂದು ಮಧ್ಯಾಹ್ನ ಚಾಲನೆ ನೀಡಲಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿ ಸಾನಿಧ್ಯ ವಹಿಸಲಿದ್ದಾರೆ. ದೇವಸ್ಥಾನದ ಮಹತ್ವಾಕಾಂಕ್ಷಿ ಯೋಜನೆ ‘ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ’ 2025– 26ನೇ ಸಾಲಿನ ಕಾರ್ಯಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅತಿಥಿಗಳಾಗಿ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಪಾಲ್ಗೊಳ್ಳಲಿದ್ದಾರೆ.
ದೇವಿ ದರ್ಶನದಲ್ಲಿ ವ್ಯತ್ಯಯ
ನವರಾತ್ರಿ ಉತ್ಸವದ ಕಾರಣ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 1ರ ವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ನವರಾತ್ರಿ ವಿಶೇಷ ದೀಪೋತ್ಸವ ಸೇವೆ ನಡೆಯಲಿದೆ. ಈ ವೇಳೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉತ್ಸವದ ದಿನಗಳಲ್ಲಿ ವಸತಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದ್ದು ಭಕ್ತರು ಸಹಕರಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.