ADVERTISEMENT

‘ಸಿಗಂದೂರು ಚಲೋ’ ಚಳವಳಿ 29ಕ್ಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 22:35 IST
Last Updated 24 ಅಕ್ಟೋಬರ್ 2020, 22:35 IST

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದಿಂದ ಅಕ್ಟೋಬರ್‌ 29ರಂದು ‘ಸಿಗಂದೂರು ಚಲೋ’ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈರಪ್ಪ ಗುತ್ತೇದಾರ್ ಹೇಳಿದರು.

‘ಸಿಗಂದೂರಿನಲ್ಲಿ ಈಚೆಗೆ ನಡೆದ ಘಟನೆಗಳು ಬೇಸರ ತರಿಸಿವೆ. ಈಡಿಗ ಸಮಾಜವು ಹಿಂದುಳಿದ ಸಮಾಜವಾಗಿದ್ದು, ತಲತಲಾಂತರದಿಂದ ಚೌಡೇಶ್ವರಿ ದೇವಿಯನ್ನು ಪೂಜಿಸುತ್ತಾ ಬಂದಿದೆ. ಧರ್ಮಸ್ಥಳದಲ್ಲಿ ಹೇಗೆ ವೀರೇಂದ್ರಹೆಗ್ಗಡೆ ಅವರು ಕ್ಷೇತ್ರವನ್ನು ನಿಭಾಯಿಸುತ್ತಿದ್ದಾರೋ ಹಾಗೆಯೇ ಸಿಗಂದೂರಿನಲ್ಲಿ ರಾಮಪ್ಪ ಅವರು ಕ್ಷೇತ್ರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ, ಅಲ್ಲಿನ ಅರ್ಚಕ ಶೇಷಗಿರಿ ಭಟ್ಟರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಶೇಷಗಿರಿ ಭಟ್ಟ ಹಠಾವೋ ಸಿಗಂದೂರು ಬಚಾವೋ ಎಂಬ ಚಳವಳಿಯನ್ನು ಸಂಘದಿಂದ ಹಮ್ಮಿಕೊಂಡಿದ್ದು, ಅಕ್ಟೋಬರ್‌ 29ರಂದು ಸಿಗಂದೂರು ಲಾಂಚ್‍ನಿಂದ ದೇವಸ್ಥಾನದವರೆಗೆ ಪ್ರತಿಭಟನೆ ನಡೆಸಲಾಗುವುದು. ಶೋಷಣೆಗೆ ಒಳಗಾದ ಸಮುದಾಯದ ತಂಟೆಗೆ ಯಾರೂ ಬರಬಾರದು ಎಂಬ ಸಂದೇಶ ಸಾರಲು ಈ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಸರ್ಕಾರ ಕ್ಷೇತ್ರವನ್ನು ಮುಜರಾಯಿ ಇಲಾಖೆ ಸೇರಿಸುವ ಎಲ್ಲ ಹುನ್ನಾರ ಮಾಡುತ್ತಿದೆ. ಜಿಲ್ಲಾಧಿಕಾರಿ ಅವರು ಮುಜರಾಯಿ ಇಲಾಖೆಗೆ ಸೇರಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಸಂಘಟನೆಯು ಖಂಡಿಸುತ್ತದೆ. ಕೂಡಲೇ ಪ್ರಸ್ತಾವವನ್ನು ಹಿಂಪಡೆಯಬೇಕು. ದೇವಸ್ಥಾನದಲ್ಲಿ ಯಥಾಸ್ಥಿತಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ಸೇರಿಸಬಾರದು ಮತ್ತು ಘಟನೆಗೆ ಕಾರಣರಾದ ಶೇಷಗಿರಿ ಭಟ್ಟರ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಹಿರೇಗೊಡ್, ಕಾಂತರಾಜ್, ಲೋಹಿತ್, ಪ್ರಕಾಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.