ADVERTISEMENT

ಶಿವಮೊಗ್ಗ: ಸ್ಮಾರ್ಟ್‌ ಸಿಟಿ ಕಾಮಗಾರಿ ಎಲ್ಲೆಲ್ಲೂ ದೂಳಿನ ಮಜ್ಜನ

ದ್ವಿಚಕ್ರ ವಾಹನಗಳ ಸವಾರರು, ಪಾದಚಾರಿಗಳು, ಬಡಾವಣೆಗಳ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ

ಚಂದ್ರಹಾಸ ಹಿರೇಮಳಲಿ
Published 7 ಜನವರಿ 2022, 3:58 IST
Last Updated 7 ಜನವರಿ 2022, 3:58 IST
ಶಿವಮೊಗ್ಗದ ವಿನಾಯಕ ನಗರ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ವಾಹನ ಸಾಗಿದಾಗ ದೂಳಿನ ಮಜ್ಜನ
ಶಿವಮೊಗ್ಗದ ವಿನಾಯಕ ನಗರ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ವಾಹನ ಸಾಗಿದಾಗ ದೂಳಿನ ಮಜ್ಜನ   

ಶಿವಮೊಗ್ಗ: ‘ಸ್ಮಾರ್ಟ್‌ ಸಿಟಿ’ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿರುವ ಪರಿಣಾಮ ನಗರದ ರಸ್ತೆಗಳು ದೂಳುಮಯವಾಗಿವೆ. ರಸ್ತೆಗಳ ಮೇಲೆ ಸಂಚರಿಸುವವರು, ಸುತ್ತಲಿನ ಬಡಾವಣೆಗಳ ನಾಗರಿಕರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಒಂದೂವರೆ ವರ್ಷಗಳಿಂದ ನಗರದ ಎಲ್ಲೆಡೆ ರಸ್ತೆಗಳನ್ನು ಕಿತ್ತುಹಾಕಲಾಗಿದೆ. ಚರಂಡಿ, ವಿದ್ಯುತ್‌ ಕೇಬಲ್‌, ನೆಟ್‌ವರ್ಕ್‌ ಕಂಪನಿಗಳ ಕೇಬಲ್‌, ಕುಡಿಯುವ ನೀರಿನ ಪೈಪ್‌ಲೈನ್‌, ಯುಜಿಡಿ ಕಾಮಗಾರಿಗಾಗಿ ರಸ್ತೆಯ ಇಕ್ಕೆಲಗಳನ್ನು ಮತ್ತೆ ಮತ್ತೆ ಅಗೆಯಲಾಗಿದೆ. ಅಗೆದ ಗುಂಡಿ, ರಸ್ತೆಗಳನ್ನು ವರ್ಷವಾದರೂ ಸಹಜ ಸ್ಥಿತಿಗೆ ತರದ ಕಾರಣ ಇಡೀ ನಗರ ದೂಳುಮಯವಾಗಿದೆ. ರಸ್ತೆಯಲ್ಲಿ ಒಂದು ಬೈಕ್‌ ಸಾಗಿದರೂ ದೂಳು ಮೇಲೇಳುತ್ತದೆ. ವಾಹನ ದಟ್ಟಣೆಯ ರಸ್ತೆಗಳಲ್ಲಂತೂ ದೂಳಿನಿಂದ ರಕ್ಷಿಸಿಕೊಳ್ಳುವುದು ಅಸಾಧ್ಯವಾಗಿದೆ. ನಿಯಮದಂತೆ ಕಾಮಗಾರಿ ನಡೆಸುವಾಗ ಟ್ಯಾಂಕರ್‌ಗಳಲ್ಲಿ ರಸ್ತೆಗೆ ನೀರು ಹಾಕಬೇಕು. ಇದ್ಯಾವುದನ್ನೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮಾಡುತ್ತಿಲ್ಲ. ಹಾಗಾಗಿ ಜನರು ಪ್ರತಿ ಕ್ಷಣವೂ ದೂಳಿನಲ್ಲೇ ಮುಳುಗೇಳುತ್ತಿದ್ದಾರೆ.

ಮುಂಜಾನೆ ಇಬ್ಬನಿಯ ಜತೆ ದೂಳು ಬೆರೆತು ದಾರಿಗಳೇ ಕಾಣದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ರಸ್ತೆಯ ಮಗ್ಗುಲಲ್ಲೇ ತೆಗೆದ ಗುಂಡಿಗಳು ಕಾಣದೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಜನರ ಗೋಳು ಕೇಳುವವರೇ ಇಲ್ಲವಾಗಿದೆ.

ADVERTISEMENT

ವ್ಯಾಪಾರವೂ ನಷ್ಟ:ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಅನುದಾನದ ಅಡಿಯಲ್ಲಿ ಸುಮಾರು ₹ 1 ಸಾವಿರ ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ನಗರದ ಬಹುತೇಕ ಕಡೆ ಕಾಮಗಾರಿ ಅವೈಜ್ಞಾನಿಕವಾಗಿದೆ. ದೂಳಿನಿಂದ ತಿಂಡಿ, ಪದಾರ್ಥಗಳು, ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಆಲಂಕಾರಿಕ ವಸ್ತುಗಳು, ಗೃಹ ಬಳಕೆ ಪದಾರ್ಥಗಳು ಸೇರಿ ಸಾಕಷ್ಟು ಹಾನಿಯಾಗುತ್ತಿದೆ. ಗ್ರಾಹಕರು ದೂಳು ಹಿಡಿದ ಸಾಮಗ್ರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಾಗರಿಕರಿಗೆ, ವ್ಯಾಪಾರಸ್ಥರಿಗೆ ತೀವ್ರ ನಷ್ಟವಾಗುತ್ತಿದೆ.

ನಗರದ ಹೃದಯ ಭಾಗದಲ್ಲಿರುವ ದುರ್ಗಿಗುಡಿ, ಹೊಸಮನೆ, ಶರಾವತಿ ನಗರ, ಕುವೆಂಪು ರಸ್ತೆ, ವಿನೋಬನಗರ, ಜೈಲ್ ರಸ್ತೆ ಮುಂತಾದ ಕಡೆಗಳಲ್ಲಿ ಕಾಮಗಾರಿ ನಡೆಸುತ್ತಿರುವ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆ. ಜಲಮಂಡಳಿ, ರಸ್ತೆ ಕಾಮಗಾರಿ, ಒಳ ಚರಂಡಿ, ವಿದ್ಯುತ್‌ಚ್ಛಕ್ತಿ ಮಂಡಳಿಯವರ ನಡುವೆ ಸಮನ್ವಯ ಇಲ್ಲವಾಗಿದೆ. ಇದರಿಂದ ಕಾಮಗಾರಿ ಸಂಪೂರ್ಣವಾಗಿಅವೈಜ್ಞಾನಿಕವಾಗಿದೆ. ನೂರಾರು ಕೋಟಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜೈಲ್‌ ಸರ್ಕಲ್‌ನಿಂದ ಲಕ್ಷ್ಮಿ ಟಾಕೀಸ್‌ವರೆಗೆ 600 ಮೀ. ಅಳತೆ ಇದೆ. ಇಷ್ಟು ಚಿಕ್ಕ ಕಾಮಗಾರಿ ಮಾಡಲು ವರ್ಷ ತೆಗೆದುಕೊಂಡಿದ್ದಾರೆ ಎಂಬುದು ಜೈಲ್‌ ರಸ್ತೆಯ ವ್ಯಾಪಾರಸ್ಥರ ಆರೋಪ.

ರಸ್ತೆಯಲ್ಲಿ ಗುತ್ತಿಗೆದಾರರು ಒಮ್ಮೆ ತೆಗೆದ ಗುಂಡಿ ಮುಚ್ಚಿ, ಮತ್ತೊಮ್ಮೆ ಗುಂಡಿ ಅಗೆಯುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿ ಸಂಪೂರ್ಣ ಕಳಪೆಯಾಗಿವೆ. ಕಾಮಗಾರಿ ನಡೆಸುವ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಹಾಗಾಗಿ, ವೇಗ ಪಡೆಯುತ್ತಿಲ್ಲ. ಇಲ್ಲಿಯ ನಿವಾಸಿಗಳು ಮತ್ತು ವರ್ತಕರು ಓಡಾಡಲು ದುಸ್ತರವಾಗಿದೆ. ಕೋವಿಡ್‌ನಿಂದ ತತ್ತರಿಸಿರುವ ವರ್ತಕರು ಈ ಅವ್ಯವಸ್ಥೆಯ ಕಾಮಗಾರಿಗಳಿಂದ ವ್ಯಾಪಾರವಿಲ್ಲದೇ ಪ್ರತಿದಿನ ಪರಿತಪಿಸುವಂತಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಕೆ.ವಿ. ವಸಂತಕುಮಾರ್ ದೂರಿದರು.

‘ಇಡೀ ನಗರ ದೂಳುಮಯವಾಗಿದೆ. ಅಧಿಕಾರಿಗಳು, ಗುತ್ತಿಗೆದಾರರ ಮಧ್ಯೆ ಸಂಪರ್ಕದ ಕೊರತೆಯ ಕಾರಣ ಕಾಮಗಾರಿಗಳು ಅವ್ಯವಸ್ಥೆಯ ಆಗರವಾಗಿವೆ. ಒಂದು ವರ್ಷದಿಂದ ಒಂದೇರಸ್ತೆಯನ್ನು ಹಲವು ಬಾರಿ ಅಗೆಯಲಾಗುತ್ತಿದೆ. ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದೂಳಿನಿಂದಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ನಗರ ಪಾಲಿಕೆ ಸದಸ್ಯರಾದ ಎಚ್‌.ಸಿ.ಯೋಗೀಶ್,ನಾಗರಾಜ ಕಂಕಾರಿ.

ದೂಳಿನಿಂದ ಆರೋಗ್ಯ ಸಮಸ್ಯೆ

ನಿರಂತರವಾಗಿ ದೂಳು ಸೇವಿಸುತ್ತಿರುವ ಪರಿಣಾಮ ಜನರು ಕಫ, ಕೆಮ್ಮು, ಉಸಿರಾಟದ ಸಮಸ್ಯೆ, ಚರ್ಮದ ಸಮಸ್ಯೆ, ತಲೆಹೊಟ್ಟು, ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ದೂಳು ಬಿದ್ದ ಹಣ್ಣು, ತಿಂಡಿ ಪದಾರ್ಥಗಳ ಸೇವನೆಯಿಂದ ಹೊಟ್ಟೆ ನೋವಿನ ಪ್ರಕರಣಗಳು ಹೆಚ್ಚಾಗಿವೆ. ಹಲವರು ಆಸ್ತಮಾಕ್ಕೆ ತುತ್ತಾಗುತ್ತಿದ್ದಾರೆ. ಜನರು ಮನೆಯಿಂದ ಹೊರಡುವಾಗ ತಲೆ, ಮುಖ ಮುಚ್ಚಿಕೊಂಡು ರಸ್ತೆಗಳಲ್ಲಿ ಸಾಗುತ್ತಿದ್ದಾರೆ. ಹಿರಿಯರು, ಮಹಿಳೆಯರು, ಮಕ್ಕಳು ಕೋವಿಡ್‌ ಇಲ್ಲದಾಗಲೂ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ತಿರುಗಾಡುವಂತಹ ಸ್ಥಿತಿ ಇದೆ. ಈ ದೂಳಿನಿಂದ ಶ್ವಾಸಕೋಶ ಸಮಸ್ಯೆಗೆ ಹೆಚ್ಚಿನ ನಾಗರಿಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ.

ಮಾರ್ಗಗಳನ್ನು ಹಿಗ್ಗಿಸಿ, ರಸ್ತೆ ಕುಗ್ಗಿಸುವುದು ಸರಿಯೇ?

ಪಾದಚಾರಿ ಮಾರ್ಗಗಳನ್ನು ಹಿಗ್ಗಿಸಿ, ರಸ್ತೆಗಳನ್ನು ಕುಗ್ಗಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡುವ ಈ ಸ್ಮಾರ್ಟ್‌ ಸಿಟಿ ಯೋಜನೆಯ ಅಗತ್ಯವಿದೆಯೇ? ದೊಡ್ಡದಾದ ಫುಟ್‌ಪಾತ್‌ಗಳನ್ನು ವ್ಯಾಪಾರಸ್ಥರು, ಬೀದಿಬದಿ ತಿಂಡಿ ವ್ಯಾಪಾರಿಗಳು, ಹೋಟೆಲ್, ವಾಣಿಜ್ಯ ಮಳಿಗೆಗಳ ಮಾಲೀಕರು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಹೊಸದಾಗಿ ನಿರ್ಮಾಣವಾಗಿರುವ ಫುಟ್‌ಪಾತ್‌ಗಳನ್ನು ತಮ್ಮ ಸ್ವತ್ತುಗಳೆಂದು ಭಾವಿಸಿಕೊಂಡಿದ್ದಾರೆ. ಪಾದಚಾರಿಗಳು ಓಡಾಡಲು ಅವಕಾಶವೇ ಇಲ್ಲ. ದೂಳು ಹಿಡಿದ ತಿಂಡಿ ಪದಾರ್ಥ ತಿಂದು ಜನರು ಆರೋಗ್ಯ ಹಾಳಾಗುತ್ತಿದೆ.

–ಎಚ್‌.ಎಂ.ಚಂದ್ರಶೇಖರಪ್ಪ, ಮಾಜಿ ಶಾಸಕ

ಕಾಮಗಾರಿ ಅವೈಜ್ಞಾನಿಕ

ಕುವೆಂಪು ರಸ್ತೆಯಲ್ಲಿನ ಕಾಮಗಾರಿ ಅವೈಜ್ಞಾನಿಕವಾಗಿದೆ. ನಗರದ ಪ್ರಮುಖ ಸಂಚಾರ ದಟ್ಟಣೆಯ ರಸ್ತೆ ವಿಸ್ತರಣೆ ಮಾಡಬೇಕು. ಅತಿಕ್ರಮಣ ತೆರವುಗೊಳಿಸಬೇಕು. ಖಾತೆದಾರರಿಗೆ ಪರಿಹಾರ ನೀಡಿ ನಂತರ ಅಭಿವೃದ್ಧಿ ಪಡಿಸಬೇಕು ಎಂದು ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಣ ಸಹ ಮಂಜೂರಾಗಿತ್ತು. ಕೆಲವು ತಾಂತ್ರಿಕ ತೊಂದರೆಗಳಿಂದ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ವಿಸ್ತರಣೆ ಮಾಡದೇ ರಸ್ತೆ ಇರುವಂತೆಯೇ ಅಭಿವೃದ್ಧಿ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದೆ. ದೂಳು ಹೆಚ್ಚಾಗಲು ಇದು ಸಹ ಪ್ರಮುಖ ಕಾರಣ.

–ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ.

***

ಮೊದಲ ಮತ್ತು ಎರಡನೇ ಕೊರೊನಾ ಅಲೆಯಿಂದ ಕಾಮಗಾರಿಗಳ ವೇಗಕ್ಕೆ ಹಿನ್ನಡೆಯಾಗಿತ್ತು. ಹಾಗಾಗಿ, ಸ್ಮಾರ್ಟ್‌ ಸಿಟಿ ಕಾಮಗಾರಿ ಪೂರ್ಣಗೊಳ್ಳುವ ಅವಧಿ 2023 ಜೂನ್‌ವರೆಗೆ ವಿಸ್ತರಿಸಲಾಗಿದೆ. ಕೆಲವೆಡೆ ಲೋಪವಿರುವುದು ನಿಜ. ನಿರ್ದಿಷ್ಟವಾಗಿ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಚಿದಾನಂದ ವಟಾರೆ, ಆಯಕ್ತರು, ನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.