ADVERTISEMENT

ಶಿವಮೊಗ್ಗ: ನಾಟಿ ಚಿಕಿತ್ಸೆ ಬೇಡ; ಸರ್ಕಾರಿ ಆಸ್ಪತ್ರೆಗೆ ತೆರಳಿ

ಶಿವಮೊಗ್ಗ ಜಿಲ್ಲೆ: 16 ತಿಂಗಳಲ್ಲಿ 1,906 ಜನರಿಗೆ ಹಾವು ಕಡಿತ, ಏಳು ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 7:12 IST
Last Updated 5 ಜೂನ್ 2025, 7:12 IST
ಡಾ.ಎಲ್.ನಾಗರಾಜ ನಾಯ್ಕ
ಡಾ.ಎಲ್.ನಾಗರಾಜ ನಾಯ್ಕ   

ಶಿವಮೊಗ್ಗ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಾವು ಕಡಿತದ ಪ್ರಕರಣ ಹೆಚ್ಚುತ್ತಿವೆ. 2024ರ ಜನವರಿಯಿಂದ 2025ರ ಏಪ್ರಿಲ್ ವರೆಗೆ 16 ತಿಂಗಳಲ್ಲಿ ಜಿಲ್ಲೆಯಲ್ಲಿ 1,906 ಜನರಿಗೆ ಹಾವುಗಳು ಕಡಿದಿವೆ. ಅದರಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ.

ಏಪ್ರಿಲ್‌ ತಿಂಗಳ ಬೇಸಿಗೆಯಲ್ಲಿ 84 ಜನರು ಹಾವು ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವು ಕಡಿತದ ನಂತರ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಗ್ರಾಮ ಪಂಚಾಯ್ತಿ ಹಾಗೂ ಶಾಲೆ-ಕಾಲೇಜು ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದೆ. ಗ್ರಾಮ ಮಟ್ಟದಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

ADVERTISEMENT

ಶಿಕಾರಿಪುರದಲ್ಲಿ ಹೆಚ್ಚು ಸಾವು: ಹಾವು ಕಡಿತದಿಂದ ಸಾವಿಗೀಡಾದ ಏಳು ಜನರಲ್ಲಿ ನಾಲ್ವರು ಶಿಕಾರಿಪುರ ತಾಲ್ಲೂಕಿನವರು. ಸಾಗರ, ಸೊರಬ ಹಾಗೂ ಹೊಸನಗರ ತಾಲ್ಲೂಕಿನ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಹಾವು ಕಡಿತದ ನಂತರ ಆಸ್ಪತ್ರೆಗೆ ಬಾರದೇ ನಾಟಿ ವೈದ್ಯರ ಬಳಿ ತೆರಳಿ ಶುಶ್ರೂಷೆ ಮಾಡಿಸಿಕೊಂಡಿದ್ದೇ ಇವರಲ್ಲಿ ಬಹುತೇಕರ ಸಾವಿಗೆ ಕಾರಣ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ ನಾಯ್ಕ ಹೇಳುತ್ತಾರೆ.

ಅಪರಾಧ ಪ್ರಕರಣ ದಾಖಲು: ಶಿಕಾರಿಪುರ ತಾಲ್ಲೂಕಿನಲ್ಲಿ ಹಾವು ಕಡಿತಕ್ಕೆ ಒಳಗಾದವರೊಬ್ಬರಿಗೆ ಔಷಧಿ ಕೊಟ್ಟು ಅವರ ಸಾವಿಗೆ ಕಾರಣವಾದ ಗೌತಮಪುರದ ನಾಟಿ ವೈದ್ಯನ ವಿರುದ್ಧ ಜಿಲ್ಲಾಡಳಿತದ ಸೂಚನೆಯಂತೆ ಆರೋಗ್ಯ ಇಲಾಖೆ ಅಪರಾಧ ಪ್ರಕರಣ ದಾಖಲಿಸಿದೆ. ಹಾವು ಕಡಿತಕ್ಕೊಳಗಾದವರನ್ನು ಆಸ್ಪತ್ರೆಗೆ ಕಳುಹಿಸದೇ ನಾಟಿ ವೈದ್ಯರೇ ಔಷಧಿ ಕೊಡುವುದು ತಪ್ಪು. ಶಿಕಾರಿಪುರ ತಾಲ್ಲೂಕಿನ ಭದ್ರಾಪುರ, ಮಾಳೂರು, ಶಿರಾಳಕೊಪ್ಪ ಸೇರಿದಂತೆ ವಿವಿಧೆಡೆ ಹಾವು ಕಡಿತಕ್ಕೆ ಔಷಧಿ ಕೊಡುವ ನಾಟಿ ವೈದ್ಯರನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಹಾವುಗಳಲ್ಲಿ ಶೇ 30ರಷ್ಟು ಮಾತ್ರ ವಿಷಕಾರಿ. ಉಳಿದವು ವಿಷಕಾರಿ ಅಲ್ಲ. ನಾಟಿ ವೈದ್ಯರು ವಿಷಕಾರಿ ಅಲ್ಲದ ಹಾವುಗಳ ಕಡಿತಕ್ಕೆ ಔಷಧ ಕೊಟ್ಟಾಗ ಅದರಿಂದ ಗುಣಮುಖರಾಗಿರುತ್ತಾರೆ. ಅದು ಅವರ ಬಗ್ಗೆ ನಂಬಿಕೆ ಮೂಡಿಸಿರುತ್ತದೆ. ಆದರೆ, ವಿಷಕಾರಿ ಹಾವು ಕಡಿದಾಗ ಆ ನಾಟಿ ಔಷಧ ಕೆಲಸ ಮಾಡದೇ ಕಡಿಸಿಕೊಂಡವರಿಗೆ ಪ್ರಾಣಾಪಾಯ ಆಗುವ ಸಂಭವ ಹೆಚ್ಚು ಎನ್ನುತ್ತಾರೆ ಎಂದು ಡಾ.ನಾಯ್ಕ.

ತೋಟ, ಗದ್ದೆಯಲ್ಲಿ ಓಡಾಡುವ ರಸ್ತೆಗಳು ಸ್ವಚ್ಚವಾಗಿರಬೇಕು. ರಾತ್ರಿ ವೇಳೆ ಟಾರ್ಚ್ ಹಾಕಿಕೊಂಡು ಗಮ್‌ ಬೂಟು ಧರಿಸಿ ಕೈಯಲ್ಲಿ ಕೋಲು ಹಿಡಿದು ಓಡಾಡಬೇಕು. ಮನೆಗಳ ಹೊರಗೆ ಒಲೆ ಬೆಚ್ಚಗಿರುತ್ತದೆ ಎಂದು ಹಾವು ಬಂದು ಮಲಗಿರುತ್ತವೆ. ಕಟ್ಟಿಗೆ ಸಂಗ್ರಹಿಸಿಟ್ಟ ಕಡೆಯೂ ಹಾವುಗಳು ಆಶ್ರಯ ಪಡೆದಿರಬಹುದು ಹೀಗಾಗಿ ಎಚ್ಚರ ವಹಿಸಬೇಕು ಎಂಬುದು ಅವರ ಸಲಹೆ.

ಶಿವಮೊಗ್ಗದ ಗೋಪಾಳ ಬಡಾವಣೆಯ ಮನೆಯೊಂದರಲ್ಲಿ ಈಚೆಗೆ ಉರಗ ರಕ್ಷಕ ಕಿರಣ್ ರಕ್ಷಣೆ ಮಾಡಿದ ಹಳದಿ ಬಣ್ಣದ ಕೇರೆ ಹಾವು
ಹಾವು ಕಡಿತದ ನಂತರ ವಹಿಸಬೇಕಾದ ಕ್ರಮಗಳ ಬಗ್ಗೆ ಜಿ.ಪಂ ಸಿಇಒ ಮಾರ್ಗದರ್ಶನದಲ್ಲಿ ಐಇಸಿ ಚಾರ್ಟ್ ಸಿದ್ಧಪಡಿಸಿದ್ದೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳಲ್ಲಿ ಜಾಗೃತಿ ಮೂಡಿಸಲಿದ್ದೇವೆ.
– ಡಾ.ನಾಗರಾಜ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ
ತೊಂದರೆ ಕೊಡದಿದ್ದರೆ ಯಾವುದೇ ಹಾವು ಕಚ್ಚುವುದಿಲ್ಲ. ಸಾರ್ವಜನಿಕರು ಹಾವು ಕಂಡರೆ ಹೊಡೆಯದೇ ಕೊಲ್ಲದೇ ಹತ್ತಿರದ ಉರಗ ರಕ್ಷಕರಿಗೆ ಕರೆ ಮಾಡಲಿ.
– ಸ್ನೇಕ್ ಕಿರಣ್, ಉರಗ ರಕ್ಷಕ ಶಿವಮೊಗ್ಗ (ಸಂಪರ್ಕ ಸಂಖ್ಯೆ: 7349001166)

ಪಿಎಚ್‌ಸಿಗಳಲ್ಲೂ ಹಾವು ಕಡಿತಕ್ಕೆ ಔಷಧಿ ಲಭ್ಯ..

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲೂ ಹಾವು ಕಡಿತಕ್ಕೆ ಔಷಧಿ (ASV-Anti Snake vanum) ಲಭ್ಯವಿದೆ. ಪಿಎಚ್‌ಸಿಗಳಲ್ಲಿ ತಲಾ 10 ವಯಲ್ ಎಎಸ್‌ವಿ ತಾಲ್ಲೂಕು ಆಸ್ಪತ್ರೆಗಳಲ್ಲಿ 50 ವಯಲ್ ಎಎಸ್‌ವಿ ಸಂಗ್ರಹಿಸಿ ಇಡಲಾಗಿದೆ. ಔಷಧಿ ಕೊರತೆ ಇದ್ದಲ್ಲಿ ಎಬಿಆರ್‌ಕೆ ನಿಧಿಯಡಿ ಖರೀದಿಸಿ ಇಟ್ಟುಕೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ.

ಜೀವ ಉಳಿಸಲು ಇದೆ

‘ಗೋಲ್ಡನ್ ಅವರ್’ ಹಾವು ಕಡಿತದ ನಂತರದ ಮೊದಲ ಒಂದು ಗಂಟೆ ಜೀವ ಉಳಿಸಲು ಅತ್ಯಂತ ಪ್ರಾಶಸ್ತ್ಯ ಅವಧಿ (ಗೋಲ್ಡನ್ ಅವರ್). ಹಾವು ಕಡಿಸಿಕೊಂಡವರಿಗೆ ಮೊದಲು ಧೈರ್ಯ ಹೇಳಬೇಕು. ನಂತರ ಕಡಿದ ಜಾಗದ ಮೇಲೆ ಕ್ರೇಪ್ ಬ್ಯಾಂಡೇಜ್ ರೀತಿ ಬಿಗಿಯಾಗಿ ಬಟ್ಟೆಯನ್ನು ಕಟ್ಟಿ ತಕ್ಷಣಕ್ಕೆ ಸಿಕ್ಕ ಯಾವುದಾದರೂ ವಾಹನದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬುದು ವೈದ್ಯಾಧಿಕಾರಿಗಳ ಸಲಹೆ. ಹಾವು ಕಡಿತದ ಜಾಗದ ಸುತ್ತಲೂ ಬ್ಲೇಡ್ ನಿಂದ ಕೊಯ್ಯುವುದು ಬಿಗಿಯಾಗಿ ಉರಿಯಿಂದ ಕಟ್ಟುವುದು ಹಾಗೂ ಸಿನಿಮಾಗಳಲ್ಲಿ ತೋರಿಸುವಂತೆ ಬಾಯಿಯಲ್ಲಿ ವಿಷ ಹೀರುವ ಇಲ್ಲವೇ ನಾಟಿ ವೈದ್ಯರ ಬಳಿ ಔಷಧಿ ಕೊಡಿಸಿ ರಾತ್ರಿಯೆಲ್ಲ ನಿದ್ರೆ ಮಾಡದಂತೆ ನೋಡಿಕೊಳ್ಳುವುದು ಬೇಡ ಎಂದು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.