ADVERTISEMENT

ಸೊರಬ: ‘ಸ್ನೇಹ ಜ್ಯೋತಿ’ ಸಂಸ್ಥೆಯಿಂದ ಉಚಿತ ಟ್ಯೂಷನ್

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಕ್ಕೆ ಮುಂದಾದ ಸೇವಾ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:03 IST
Last Updated 11 ಫೆಬ್ರುವರಿ 2026, 6:03 IST
ಸೊರಬ ತಾಲ್ಲೂಕಿನ ಮುಟುಗುಪ್ಪೆ ಗ್ರಾಮದಲ್ಲಿ ವಿದ್ಯಾರ್ಥಿಗಳು
ಸೊರಬ ತಾಲ್ಲೂಕಿನ ಮುಟುಗುಪ್ಪೆ ಗ್ರಾಮದಲ್ಲಿ ವಿದ್ಯಾರ್ಥಿಗಳು   

ಸೊರಬ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಟ್ಟಣದ ಸ್ನೇಹ ಜ್ಯೋತಿ ಸಮಾಜ ಸೇವಾ ಸಂಸ್ಥೆಯು ತಾಲ್ಲೂಕಿನ 9 ಗ್ರಾಮಗಳಲ್ಲಿ ಹಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಪ್ರೋತ್ಸಾಹಕ ತರಗತಿಗಳನ್ನು ನಡೆಸುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ತಾಲ್ಲೂಕಿನ ಕುಪ್ಪಗಡ್ಡೆ, ಹಳೆ ಸೊರಬ, ಹುಲ್ತಿಕೊಪ್ಪ, ಮುಟುಗುಪ್ಪೆ, ನಡಹಳ್ಳಿ, ಉರಗನಹಳ್ಳಿ, ಕೊಡಕಣಿ, ಕಾನಕೇರಿ ಹಾಗೂ ಹೊಸಕೊಪ್ಪ ಗ್ರಾಮಗಳಲ್ಲಿ ಸ್ಥಳೀಯ ಸ್ವಯಂ ಸೇವಕಿಯರ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿ ಗ್ರಾಮದಿಂದ 25 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿ ದಿನ ಶಾಲೆ ಅವಧಿ ನಂತರ ಸಂಜೆ 2 ಗಂಟೆ ಆಯಾ ಗ್ರಾಮಗಳಲ್ಲೇ ಮಾರ್ಗದರ್ಶನ ನೀಡಲಾಗುತ್ತಿದೆ.

ಕಲಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿನ ನ್ಯೂನತೆಗಳಿಗೆ ಪರಿಹಾರವಾಗಿ ಅಕ್ಷರಾಭ್ಯಾಸ, ಶಾಲೆಯ ನೀಡಿರುವ ಹೋಂ ವರ್ಕ್ ಮಾಡಿಸುವುದು, ಪಠ್ಯದ ವಿಷಯಗಳಲ್ಲಿ ಕಲಿಕಾ ಸಮಸ್ಯೆಗೆ ಪರಿಹಾರ, ಕರಕುಶಲತೆ, ಮನರಂಜನೆ ಮತ್ತು ಕ್ರೀಡೆ ಮೂಲಕ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ.

ADVERTISEMENT

‘ಗ್ರಾಮೀಣ ಭಾಗದಲ್ಲಿ ಪೋಷಕರು ಕೃಷಿ ಕೆಲಸದಲ್ಲಿ ತೊಡಗಿರುವುದರಿಂದ ಮಕ್ಕಳ ಕಲಿಕೆಗೆ ಒತ್ತು ನೀಡಲು ಆಗುವುದಿಲ್ಲ. ಶಾಲೆ ಬಿಟ್ಟ ನಂತರ ಮಕ್ಕಳು ರಸ್ತೆಬದಿಯಲ್ಲಿ ಆಟ, ಹೊಳೆಗಳಲ್ಲಿ ಆಟ ಆಡುವುದರಿಂದ ಅವರ ಸುರಕ್ಷತೆಯ ಭಯ ಇತ್ತು. ಈ ತರಗತಿಗಳು ಆರಂಭವಾದ ಮೇಲೆ ಮಕ್ಕಳು ಸ್ವಯಂ ಸೇವಕಿಯರ ಮಾರ್ಗದರ್ಶನದಲ್ಲಿ ಪಾಠ ಕಲಿಯುತ್ತಿದ್ದಾರೆ. ಬಿಡುವಿನ ವೇಳೆಯ ಈ ಕಾರ್ಯ ಸದುಪಯೋಗವಾಗಿದೆ. ನಾವು ಮನೆಗೆ ಬರುವ ಹೊತ್ತಿಗೆ ಮಕ್ಕಳು ಮನೆಯಲ್ಲೇ ಇರುತ್ತಾರೆ. ಮಕ್ಕಳ ಕಲಿಕೆಯಲ್ಲಿ ಬೆಳವಣಿಗೆಯಾಗಿದೆ’ ಎನ್ನುತ್ತಾರೆ ಪೋಷಕ ರಾಘವೇಂದ್ರ.

‘ಆಯಾ ಗ್ರಾಮದಲ್ಲಿನ, ಉನ್ನತ ಶಿಕ್ಷಣ ಪಡೆದ ಮಹಿಳೆ ಹಾಗೂ ಯವತಿಯರನ್ನು ಗುರುತಿಸಿ ಅವರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಲಾಗುತ್ತಿದೆ. ಶಿಕ್ಷಣದ ಪ್ರಗತಿಗೆ ಪೂರಕವಾಗಿ ಪೋಷಕರ ಸಹಕಾರದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಪೋಷಕರ ಮಕ್ಕಳನ್ನು ಗುರುತಿಸಿ ಅವರಿಗೆ ಇನ್ನಷ್ಟು ಶಿಕ್ಷಣದತ್ತ ಒಲವು ತೋರಿಸುವ ಕಾರ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ, ಶ್ರದ್ಧೆ, ಶಿಸ್ತು ಮುಂತಾದ ಮೌಲ್ಯಗಳನ್ನು ತಿಳಿಸಲಾಗುತ್ತಿದೆ’ ಎನ್ನುತ್ತಾರೆ ಸ್ನೇಹ ಜ್ಯೋತಿ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ಜೋಯೆಲ್‍. 

ಸೊರಬ ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಉಚಿತ ಟ್ಯೂಷನ್ ಕಾರ್ಯಕ್ರಮಕ್ಕೆ ಚಾಲನೆ
ಶಿಕ್ಷಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುತ್ತಿರುವ ಸ್ನೇಹ ಜ್ಯೋತಿ ಸಮಾಜದ ಕಾರ್ಯ ಇತರರಿಗೂ‌ ಮಾದರಿ. ಶಿಕ್ಷಣ ಇಲಾಖೆ ಜೊತೆ ಸಂಘ– ಸಂಸ್ಥೆಗಳು ಈ ರೀತಿಯಲ್ಲಿ ಕೈ ಜೋಡಿಸಿದರೆ ಗುಣಮಟ್ಟಣದ ಶಿಕ್ಷಣ ನೀಡಲು ಸಾಧ್ಯ.
– ಆರ್.ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ‌ ಸೊರಬ
ಪ್ರತಿ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಗ್ರಾಮೀಣ ಮಕ್ಕಳ ಶಿಕ್ಷಣದ ಪ್ರಗತಿಗೆ ನಾವೆಲ್ಲರೂ ಕೈಜೋಡಿಸಬೇಕು. ಮಕ್ಕಳ ಸುಪ್ತ ಪ್ರತಿಭೆಗೆ ಪ್ರೀತಿ ಪ್ರೋತ್ಸಾಹದ ಮಾರ್ಗದರ್ಶನ ಒದಗಿಸಲು ಸಂಸ್ಥೆಯು ಕಾರ್ಯ ಪ್ರವೃತ್ತವಾಗಿದೆ.
– ಸಿಸ್ಟರ್ ಜೋಯೆಲ್‍, ಸ್ನೇಹ ಜ್ಯೋತಿ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.