
ಸೊರಬ: ‘ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಸರ ವೈವಿಧ್ಯ ಕುರಿತು ದಾಖಲಿಸುವ ದಾಖಲೀಕರಣ, ಜೀವವೈವಿಧ್ಯ ದಾಖಲೆ ರಚನೆಯಲ್ಲಿ ಬಹುಶಃ ಸೊರಬ ತಾಲ್ಲೂಕ್ಕೇ ಪ್ರಥಮ. ಈ ಪ್ರಕ್ರಿಯೆ ಶ್ಲಾಘನೀಯ ಕೂಡ’ ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶೀಸರ ಹೇಳಿದರು.
ತಾಲ್ಲೂಕು ಇಂಡುವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಂಡಾವತಿ ನದಿ ಅಭಿಯಾನ ಹಾಗೂ ಸೊರಬ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಜೀವವೈವಿಧ್ಯ ಸಮಿತಿಯ ಐದು ವರ್ಷಗಳ ಕಾರ್ಯ ಚಟುವಟಿಕೆಗಳ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಜೀವವೈವಿಧ್ಯ ಸಮಿತಿಯ ಮೂಲಕ ಆಯಾ ಪ್ರದೇಶದ ವಿಶಿಷ್ಟ ತಾಣಗಳನ್ನು ಗುರುತಿಸುವುದು, ಅಂತಹ ತಾಣಗಳನ್ನು ಸಂರಕ್ಷಿಸುವ ಜೊತೆಗೆ ಇನ್ನಷ್ಟು ವೃದ್ಧಿಗೊಳಿಸಲು ಅವಕಾಶವಿದೆ. ಇಂಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುನವಳ್ಳಿ ಹುಲಿಕಣಿವೆ ವಿಶಿಷ್ಟ ಹಾಗೂ ಅವನತಿ ಅಂಚಿನಲ್ಲಿರುವ ಸೀತಾ ಅಶೋಕ ವೃಕ್ಷಗಳ ಸಮೂಹವನ್ನೊಳಗೊಂಡಿದೆ. ಇನ್ನೂ ಅನೇಕ ಅಪರೂಪದ ಔಷಧೀಯ ಸಸ್ಯಗಳನ್ನು ರಕ್ಷಿಸಿಕೊಂಡಿದೆ. ಇಂತಹ ಪ್ರಮುಖ ಸ್ಥಳಗಳನ್ನು ಗುರುತಿಸಿ ಪಾರಂಪರಿಕ ಜೈವಿಕ ತಾಣವನ್ನಾಗಿಸಲು ಮುಂದಾಗಬೇಕು’ ಎಂದು ಹೇಳಿದರು.
‘ಮಂಡಳಿಯಿಂದ ಕ್ರಿಯಾಶೀಲ ಜೀವವೈವಿಧ್ಯ ಸಮಿತಿಗಳಿಗೆ ಪ್ರೋತ್ಸಾಹ ನೀಡಲು ಯೋಜಿಸಿದ್ದು, ಆ ಮೂಲಕ ಸಮಿತಿಯನ್ನು ಸದೃಢಗೊಳಿಸಲು ಸಾಧ್ಯವಿದೆ. ಸುಸ್ಥಿರ ಕೃಷಿಗೆ ಪರಿಸರ ಸಮತೋಲನ ಅತ್ಯಗತ್ಯ. ಹಾಗಾಗಿ ಅರಣ್ಯ, ಬೆಟ್ಟಗುಡ್ಡ ಸಂರಕ್ಷಣೆಯ ಜೊತೆಗೆ ಜಲಮೂಲಗಳನ್ನು ಕಾಯ್ದುಕೊಳ್ಳುವುದು ಎಲ್ಲರ ಕರ್ತವ್ಯ’ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಜಗದೀಶ್ ವಡ್ನಾಳ್ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಮೂರ್ತಿ ಎಂ, ಉಪಾಧ್ಯಕ್ಷೆ ಸುಮಾ, ಸದಸ್ಯ ಶಿವಾನಂದಪ್ಪ, ಯೋಗೇಶ್, ಪಿಡಿಒ ಸಂತೋಷ್, ಕಾರ್ಯದರ್ಶಿ ಷಣ್ಮುಖ, ಮಂಡಳಿ ಅಧಿಕಾರಿ ಕೆ.ಎಸ್.ಪವಿತ್ರಾ, ಕೆ.ಆರ್.ಪ್ರಸನ್ನ, ಶ್ರೀಪಾದ ಬಿಚ್ಚುಗತ್ತಿ, ಎಚ್.ಎಂ.ಪ್ರಶಾಂತ್, ಸುಬ್ರಹ್ಮಣ್ಯ ಗುಡಿಗಾರ್, ವಿನಾಯಕ ಅವಲಗೋಡು, ಸುಮನಾ, ದೀಪಕ್ ಮಳಲಗದ್ದೆ, ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.