ಸೊರಬ: ಲಾರಿ ಹರಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ಅವರ ಪುತ್ರ ಮೊಹಮ್ಮದ್ ಆಹಿಲ್ ಖಾನ್ (3) ಮೃತ ಬಾಲಕ. ಅಂಗನವಾಡಿಯಲ್ಲಿದ್ದ ಬಾಲಕ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿರುವ ವೇಳೆ ಘಟನೆ ಸಂಭವಿಸಿದೆ.
ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳದಲ್ಲಿ ಮೃತ ಬಾಲಕನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿದ್ದರು.
ಫರೀನಾ ಬೇಗಂ ಹೆರಿಗೆಗೆಂದು ಕೆರೆಕೊಪ್ಪದ ತವರು ಮನೆಗೆ ಬಂದಿದ್ದರು. ಅಜ್ಜಿ ನಸೀಮಾ ಬಾನು ಮಗುವನ್ನು ಅಂಗನವಾಡಿಯಿಂದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಅಜ್ಜಿಯನ್ನು ಕಂಡ ಮಗು ದಿಢೀರ್ ರಸ್ತೆ ಬದಿ ಓಡಿ ಬಂದಿದೆ. ಈ ವೇಳೆ ಬರುತ್ತಿದ್ದ ಲಾರಿಗೆ ಸಿಲುಕಿ ಮೃತಪಟ್ಟಿದೆ. ಮಗುವಿನ ತಂದೆ ಉದ್ಯೋಗ ನಿಮಿತ್ತ ದುಬೈನಲ್ಲಿದ್ದಾರೆ.
ರಸ್ತೆ ಬದಿಯಲ್ಲಿದೆ ಅಂಗನವಾಡಿ:
ಸೊರಬ- ಬನವಾಸಿ ಮಾರ್ಗದ ಕೆರೆಕೊಪ್ಪ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಅಂಗನವಾಡಿ ಕೇಂದ್ರವು ರಸ್ತೆ ಪಕ್ಕದಲ್ಲಿರುವುದೇ ಘಟನೆಗೆ ಕಾರಣವಾಗಿದೆ. ರಾಜ್ಯ ಹೆದ್ದಾರಿ ಆಗಿರುವ ಈ ಮಾರ್ಗದಲ್ಲಿನ ಅಂಗನವಾಡಿ ಸ್ಥಳಾಂತರ ಮಾಡಬೇಕಿದೆ. ನೂತನ ಅಂಗನವಾಡಿ ಕಟ್ಟಡವನ್ನು ಗ್ರಾಮದ ಒಳ ಭಾಗದಲ್ಲಿ ನಿರ್ಮಿಸಲು ಗ್ರಾಮಸ್ಥರು ನಿವೇಶನ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.