ADVERTISEMENT

ಬಂಗಾರಪ್ಪ ಒಡನಾಡಿಗಳ ಮಾರ್ಗದರ್ಶನ ನನಗೆ ಭದ್ರ ಭುನಾದಿ: ಮಧು ಬಂಗಾರಪ್ಪ

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ‌ ಸಚಿವ ಮಧು ಬಂಗಾರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:31 IST
Last Updated 31 ಜುಲೈ 2025, 7:31 IST
ಸೊರಬ ಪಟ್ಟಣದ ರಾಜ್ ಕಲಾಕ್ಷೇತ್ರದಲ್ಲಿ‌ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಸೊರಬ ಪಟ್ಟಣದ ರಾಜ್ ಕಲಾಕ್ಷೇತ್ರದಲ್ಲಿ‌ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಸೊರಬ: ‘ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಒಡನಾಡಿಗಳ ಮಾರ್ಗದರ್ಶನ ನನಗೆ ಭದ್ರ ಬುನಾದಿಯಿದ್ದಂತೆ. ಅವರ ಸಲಹೆ ಮೇರೆಗೆ ರಾಜಕೀಯದಲ್ಲಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಾಜ್ ಕಲಾಕ್ಷೇತ್ರದಲ್ಲಿ‌ ಕಂದಾಯ ಇಲಾಖೆ, ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಹಂಚಿ‌ ತಾಂಡ ಹಾಗೂ ವಡ್ಡೀಗೆರೆ ಕಂದಾಯ ಗ್ರಾಮಗಳ 96 ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬಂಗಾರಪ್ಪ ಅವರ ಬಗರ್ ಹುಕುಂ ಹೋರಾಟದ ಫಲವಾಗಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಹಾಗೂ ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅವರ ಪರ ಸರ್ಕಾರ ನಿಲ್ಲುತ್ತದೆ. ಕಾನೂನು ತೊಡಕುಗಳನ್ನು ಹೋಗಲಾಡಿಸಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತೇವೆ. ಭಯಪಡುವ ಅವಶ್ಯಕತೆಯಿಲ್ಲ’ ಎಂದು ಅಭಯ ನೀಡಿದರು.

ADVERTISEMENT

ಅರಣ್ಯ ಹಕ್ಕು ಕಾಯ್ದೆಯನ್ವಯ ಅರಣ್ಯದಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ನ್ಯಾಯ ಒದಗಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಶರಾವತಿ ಸಂತ್ರಸ್ತರು 1958ರಲ್ಲಿ ಜಲಾಶಯಕ್ಕಾಗಿ ತಮ್ಮ ಭೂಮಿ ಬಿಟ್ಟುಕೊಟ್ಟಿದ್ದು, ಈವರೆಗೆ ಅವರಿಗೆ ಹಕ್ಕುಪತ್ರ ನೀಡಲಾಗಿಲ್ಲ. ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ಭಾಗದಲ್ಲಿ ಸಂತ್ರಸ್ತರಿದ್ದಾರೆ. ಇವರಿಗೆ ಅಂದಾಜು 10,000 ಹೆಕ್ಟೇರ್ ಭೂಮಿ ನೀಡಬೇಕಿದ್ದು, ಕಾನೂನು ರೂಪಿಸಿ ಕ್ರಮ ಕೈಗೊಳ್ಳಬೇಕಿದೆ. ಈ‌ ನಿಟ್ಟಿನಲ್ಲಿ ಚರ್ಚೆ ಹಾಗೂ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಹಕ್ಕುಪತ್ರ ಒದಗಿಸಲು ಸರ್ಕಾರ ಶ್ರಮಿಸುತ್ತಿದ್ದು, ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದ್ದಾರೆ. 94 ಸಿ, 94 ಸಿಸಿ ಅರ್ಜಿಗಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಈ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದ್ದು, ಹಕ್ಕುಪತ್ರ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಹಕ್ಕುಪತ್ರ ಇಲ್ಲದ ಗ್ರಾಮಗಳಲ್ಲಿ ಮುಖಂಡರು, ಸಮಿತಿ ಸದಸ್ಯರು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು. 

ತಹಶೀಲ್ದಾರ್ ಮಂಜುಳಾ ಹೆಗಡಾಳ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ರುದ್ರೇಗೌಡ ಮಾತನಾಡಿದರು. ತಾ.ಪಂ ಇಒ ಶಶಿಧರ್, ತಾ.ಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಜಿ.ಪಂ ಯೋಜನಾಧಿಕಾರಿ ನಂದಿನಿ, ಗ್ಯಾರಂಟಿ ಯೊಜನೆ ಪ್ರಾಧಿಕಾರದ ಅಧ್ಯಕ್ಷ ಜಯಶೀಲ್ ಗೌಡ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ತಬಲಿ‌ ಬಂಗಾರಪ್ಪ, ಸದಾನಂದ ಗೌಡ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ ಶೇಖರ್, ಪುರಸಭೆ ಸದಸ್ಯರಾದ ವೀರೇಶ ಮೇಸ್ತ್ರಿ, ರಂಜಿನಿ ಪ್ರವೀಣ್ ಕುಮಾರ್, ಅಫನಮ್, ಅನ್ಸರ್ ಸಾಬ್, ಪ್ರಸನ್ನ‌ಕುಮಾರ್, ನಾಗರಾಜ್ ಚಿಕ್ಕಸವಿ, ಪ್ರೇಮಾ, ಸುವರ್ಣಾ ನಾಯ್ಕ., ಲಕ್ಷ್ಮಣಪ್ಪ, ಕೆ.ವಿ ಗೌಡ, ಶಿವಕುಮಾರ್ ಇದ್ದರು.

ರಸ್ತೆ ನೀರಾವರಿಗೆ ಅನುದಾನ ಬಳಕೆ

ಶಾಸಕರ ಕ್ಷೇತ್ರಾಭಿವೃದ್ಧಿಗೆ ₹50 ಕೋಟಿ ಮಂಜೂರಾಗಿದ್ದು ಸೊರಬದಲ್ಲಿ ₹46 ಕೋಟಿ ಅನುದಾನವನ್ನು ರಸ್ತೆಗಾಗಿ ಬಳಕೆ ಮಾಡಲಾಗುತ್ತಿದೆ. 30 ಕಿ.ಮೀ ಪ್ರಗತಿ ಪಥ ರಸ್ತೆ ಕಾಮಗಾರಿ‌ ಕೈಗೊಳ್ಳಲಾಗುತ್ತಿದೆ. ರಸ್ತೆಗಾಗಿ ಅಂದಾಜು ₹100 ಕೋಟಿ ಅನುದಾನದ ಅಗತ್ಯವಿದೆ. ₹162 ಕೋಟಿ ಅನುದಾನವನ್ನು ನೀರಾವರಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಫಲಾನುಭವಿಗಳಿಗೆ ಸವಲತ್ತು

ವಿತರಣೆ ತಾಲ್ಲೂಕಿನ ಹಂಚಿ ತಾಂಡ ಮತ್ತು ತತ್ತೂರು ವಡ್ಡಿಗೆರೆ 2 ಕಂದಾಯ ಗ್ರಾಮಗಳ 96 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು‌ ಸಚಿವರು ವಿತರಿಸಿದರು. ಸರ್ಕಾರಿ ಪಾಲಿಟೆಕ್ನಿಕ್‌ನ 14 ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿದರು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಟೈಲರಿಂಗ್ ಬಡಗಿ ವೆಲ್ಡಿಂಗ್ ಗಾರೆ ಕೆಲಸದವರು ಸೇರಿದಂತೆ ಒಟ್ಟು 76 ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು. 8 ಫಲಾನುಭವಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.