
ತೀರ್ಥಹಳ್ಳಿ: ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಸೂಕ್ಷ್ಮವಾದ ಕಾಲಘಟ್ಟ. ಮನಸ್ಸನ್ನು ನಿಯಂತ್ರಿಸದಿದ್ದರೆ ಪಶ್ಚಾತಾಪ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿವಿಧ ಸಂಘಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನನ್ನು ಕೆಡಿಸುವ ಉತ್ಪನ್ನಗಳು ರಾಷ್ಟ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ನಶೆಯಿಂದಾಗಿ ಯುವ ಪೀಳಿಗೆ ವಯಸ್ಸಾದವರಂತೆ ಕಾಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ದೇಶ ಸ್ವಾತಂತ್ರ್ಯಗೊಂಡರೆ ಹಾಲು–ಜೇನಾಗಲಿದೆ. ಆರ್ಥಿಕವಾಗಿ ಸಬಲವಾಗಬಹದು, ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ ಎಂಬ ಭಾವನೆಯಿಂದ ಹೋರಾಡಿದರು. ಸ್ವಾತಂತ್ರ್ಯಗೊಂಡು ಇಷ್ಟು ವರ್ಷಗಳು ಆದರು ಭವಿಷ್ಯ ಭದ್ರವಾಗಲಿಲ್ಲ. ಬದುಕು ಕಟ್ಟುವ ಹೋರಾಟಗಾರರ ಕನಸುಗಳು ನನಸಾಗಲಿಲ್ಲ ಎಂದರು.
ಬೇರೆಯವರ ಸಾವು ನೋಡಿ ಸಂತೋಷ ಪಡುವ ವಿಕೃತ ಮಾನಸ್ಥಿತಿ ವಿದ್ಯಾವಂತ ಸಮಾಜವನ್ನು ತಲುಪಿದೆ. ವಿಚಾರವಾದಿಗಳು, ನಗರ ನಕ್ಸಲರು ಬಡವರ ಮಕ್ಕಳನ್ನು ಕಾಡಿಗೆ ತಳ್ಳಿದರು. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಶಿಕ್ಷಣ ಕೊಡಿಸಿದರು. ನಮ್ಮ ನಡುವೆ ಅನೇಕ ವೈರುದ್ಯಗಳಿವೆ. ಶಿಕ್ಷಣ ಬದುಕು ಕಟ್ಟಿಕೊಳ್ಳಲು ಅನಿವಾರ್ಯ ಎಂದು ತಿಳಿಸಿದರು.
ಜ್ಞಾನ ಮತ್ತು ವಿವೇಕವನ್ನು ವರ್ತಮಾನ ಪತ್ರಿಕೆಗಳನ್ನು ಓದುವ ಮೂಲಕ ಸಂಪಾದಿಸಬೇಕು. ಸಾಮಾಜಿಕ ಜಾಲತಾಣಗಳ ಸುದ್ದಿಗಳ ಬಗ್ಗೆ ಆಕರ್ಷಣೆ ಬೇಡ ಎಂದು ಪಶು ವೈದ್ಯ ಡಾ.ಮುರಳೀಧರ ಕಿರಣಕೆರೆ ಹೇಳಿದರು.
ವಿದ್ಯೆಯ ಜೊತೆಗೆ ಶಿಸ್ತು ಕಲಿಯಬೇಕು. ಶಿಸ್ತುಬದ್ಧ ಜೀವನ ಬದುಕಿನ ದಿಕ್ಕನ್ನು ಬದಲಾಯಿಸುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.
ಸಭೆಯಲ್ಲಿ ದಾನಿಗಳಾದ ಸುಚರಿತಾ ಎಂ. ಅವರನ್ನು ಗೌರವಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯರಾದ ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ಪ್ರಾಂಶುಪಾಲೆ ವೈ.ಎಂ.ಸುಧಾ, ಉಪನ್ಯಾಸಕರಾದ ಎಂ.ಎಸ್. ದಿವಾಕರ್, ಮಂಜಪ್ಪ ಎನ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.