ADVERTISEMENT

24ರಂದು ಸರ್ಕಾರಕ್ಕೆ ಜ್ಞಾಪಕ ಪತ್ರ ಸಲ್ಲಿಕೆ: ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:38 IST
Last Updated 12 ಆಗಸ್ಟ್ 2022, 5:38 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ   

ಶಿವಮೊಗ್ಗ: ಪಂಚಮಸಾಲಿ ಸಮಾಜ ವನ್ನು ಪ್ರವರ್ಗ ‘2ಎ’ಗೆ ಸೇರಿಸಲು ಒತ್ತಾಯಿಸಿ ಆ. 24ರಂದು ಶಿವಮೊಗ್ಗದಲ್ಲಿ ಬೃಹತ್ ರ‍್ಯಾಲಿ ನಡೆಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ಸರ್ಕಾರಕ್ಕೆ ಜ್ಞಾಪಕಪತ್ರ ಸಲ್ಲಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಗಡುವು ಆಗಸ್ಟ್ 22 ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಯಾಗಿದ್ದಾಗ ಮೀಸಲಾತಿನೀಡುವ ಭರವಸೆ ನೀಡಿದ್ದರು. ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಮೂರು ಬಾರಿ ಭರವಸೆ ನೀಡಿದ್ದರು. ಅದರೆ ಈಡೇರಿಸಿಲ್ಲ. ಕೊನೆಗೆ ಅನಿವಾರ್ಯವಾಗಿ ಮುಖ್ಯ ಮಂತ್ರಿ ಮನೆ ಮುಂದೆ ಧರಣಿ ಕೂರುವ ತೀರ್ಮಾನ ಮಾಡಿದ್ದೆವು. ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದಲ್ಲದೇ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದ್ದು, ಇನ್ನೂ ವರದಿ ಬಂದಿಲ್ಲ ಎಂದರು.

ADVERTISEMENT

ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸಲು ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತಿ ಸಭೆಗಳ ನಡೆಸಲಾಗುತ್ತಿದೆ. ಅಭಿಯಾನದ ವೇಳಾಪಟ್ಟಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಆ. 16ರಂದು ಸಾಗರ, 17ರಂದು ಸೊರಬ, 18ರಂದು ಹೊಸನಗರ, 19ರಂದು ತೀರ್ಥಹಳ್ಳಿ, 20ರಂದು ಶಿಕಾರಿಪುರ, 21ರಂದು ಭದ್ರಾವತಿ, 23ರಂದು ಶಿವಮೊಗ್ಗ ನಗರದಲ್ಲಿ ಜಾಗೃತಿ ಸಭೆ ನಡೆಯಲಿದೆ. ಆ. 24ರಂದು ಶಿವಮೊಗ್ಗದಲ್ಲಿ ರ‍್ಯಾಲಿ ನಡೆಸಲಾಗುವುದು ಎಂದು ಹೇಳಿದರು.

‘ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬುದು ನಮ್ಮ ಒತ್ತಾಯ. ಮೀಸಲಾತಿ ಘೋಷಣೆ ಮಾಡುವ ವಿಶ್ವಾಸವಿದೆ. ನಮಗೆ ಮೀಸಲಾತಿ ನೀಡಲು ಬೇರೆ ಸಮಾಜದವರು ಯಾರೂ ಅಪಸ್ವರ ಎತ್ತಿಲ್ಲ. ಬೆಂಬಲ ನೀಡಿದ್ದಾರೆ. ಸಂವಿಧಾನ ಬದ್ಧವಾಗಿ ಎಲ್ಲ ಸಮುದಾಯಗಳು ಮೀಸಲಾತಿ ಕೇಳುವು ದರಲ್ಲಿ ತಪ್ಪಿಲ್ಲ’ ಎಂದು ಸ್ವಾಮೀಜಿ ಹೇಳಿದರು.

ಡಾ.ಮಾಲತೇಶ್, ಪ್ರೊ.ವಿಜ ಯಕುಮಾರ್, ಮಹಾರುದ್ರಪ್ಪ ಕಣವಿ ಮನೆ, ಸರಳಾ ಕರಿಬಸಪ್ಪ, ಅರವಿಂದ್ ಸಮನವಳ್ಳಿ, ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.