
ಶಿವಮೊಗ್ಗ: ವಚನಕಾರರಲ್ಲಿ ವಿಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವದ ಅಂಬಿಗರ ಚೌಡಯ್ಯ, ವೃತ್ತಿಯಿಂದ ಅಂಬಿಗನಾಗಿ ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಯ ವಚನ ರಚನೆಯ ಮೂಲಕ ಸಮಾಜ ಸುಧಾರಕರಾಗಿದ್ದಾರೆ ಎಂದು ಇಲ್ಲಿನ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಹೇಳಿದರು.
ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಹಂಚಿನಮನೆ ಪಾರ್ವತಮ್ಮ ಮತ್ತು ಗುರುಬಸಪ್ಪ ದತ್ತಿ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ಬದುಕು–ಬರಹ ಕುರಿತು ಉಪನ್ಯಾಸ ನೀಡಿದರು.
ಬಸವಣ್ಣನವರ ಸಮಕಾಲೀನನಾಗಿದ್ದ ಅಂಬಿಗರ ಚೌಡಯ್ಯ ನಿಷ್ಠುರ ನಿಲುವಿನ ಹರಿತ ಮಾತುಗಳ ವಚನಗಳಿಂದ ಜಡ್ಡುಗಟ್ಟಿದ ಸಮಾಜದ ಓರೆ–ಕೋರೆಗಳನ್ನು ತಿದ್ದುವ ಮೂಲಕ ವಾಸ್ತವವಾದಿಯಾಗಿದ್ದರು. ತಾನು ರಚಿಸಿದ ವಚನಗಳ ಅಂಕಿತವನ್ನು ಇಷ್ಟ ದೈವದ ಬದಲು ತನ್ನ ಹೆಸರನ್ನೇ ಅಂಕಿತಗೊಳಿಸಿದ ದಿಟ್ಟ ಶರಣ ಅಂಬಿಗರ ಚೌಡಯ್ಯ. ವಿದ್ಯಾರ್ಥಿಗಳು ಮೌಢ್ಯತೆಯನ್ನು ತಿರಸ್ಕರಿಸಿ, ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಾಲೆಯ ಪ್ರಾಚಾರ್ಯ ಎಸ್. ಭರಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನ ಸಾಹಿತ್ಯಕ್ಕೆ ಪ್ರೇರಣೆ ವಿಶ್ವಗುರು ಬಸವಣ್ಣನವರು. ಸಂಸ್ಕೃತದ ಬದಲು ಸರಳ ಕನ್ನಡದಲ್ಲಿ ವಚನ ರಚನೆ ಮಾಡಿರುವುದು ವಚನಕಾರರ ಹೆಗ್ಗಳಿಕೆಯಾಗಿದೆ ಎಂದರು.
ಬಸವಾಶ್ರಮದ ಮಾತೆ ಶರಣಾಂಬಿಕಾ ತಾಯಿ ಆಶೀರ್ವಚನ ನೀಡಿದರು. ಮಾಜಿ ಪ್ರಧಾನರು ಅಂಬಾರಗೊಪ್ಪದ ಶೇಖರಪ್ಪ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ. ಶಶಿಧರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸುಭಾಷ್ ಚಂದ್ರ ಸ್ಥಾನಿಕ್ ಪ್ರಸ್ತಾವಿಕ ನುಡಿಗೈದರು. ಉಪಾಧ್ಯಕ್ಷ ಸೋಮಶೇಖರ್ ಗಟ್ಟಿ ವಚನಗಾಯನ ಮಾಡಿದರು.
ವಿದ್ಯಾರ್ಥಿಗಳಾದ ಎ.ಡಿ. ಚಂದು ಪ್ರಾರ್ಥಿಸಿ, ಕೀರ್ತನಾ ಸ್ವಾಗತಿಸಿ, ಡಿ.ಸಿಂಚನಾ., ಚೈತ್ರಾ ನಿರೂಪಿಸಿ, ಎನ್.ತೇಜು, ಭೂಮಿಕಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.