ADVERTISEMENT

ಸ್ವಿಂಗ್ ಬೌಲರ್‌ಗಳಿಗೆ ಅವಕಾಶ ಹೆಚ್ಚು'\: ಬ್ರಿಜೇಶ್ ಪಟೇಲ್

ಕೆಎಸ್‌ಸಿಎ ಶಿವಮೊಗ್ಗ ವಲಯದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:38 IST
Last Updated 5 ಅಕ್ಟೋಬರ್ 2025, 6:38 IST
ಶಿವಮೊಗ್ಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದ ವಾರ್ಷಿಕ ಪ್ರಶಸ್ತಿಯನ್ನು ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಸದಸ್ಯರು ಪಡೆದರು
ಶಿವಮೊಗ್ಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದ ವಾರ್ಷಿಕ ಪ್ರಶಸ್ತಿಯನ್ನು ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಸದಸ್ಯರು ಪಡೆದರು   

ಶಿವಮೊಗ್ಗ: ‘ಕ್ರಿಕೆಟ್‌ನಲ್ಲಿ ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ನಿಪುಣರಾದರಷ್ಟೇ ಸಾಲದು. ಉತ್ತಮ ಫೀಲ್ಡಿಂಗ್ ಕೂಡ ಮುಖ್ಯ. ಚೆಂಡನ್ನು ಇನ್‌ಸ್ವಿಂಗ್ ಮತ್ತು ಔಟ್‌ಸ್ವಿಂಗ್ ಮಾಡಬಲ್ಲ ವೇಗದ ಬೌಲರ್‌ಗಳಿಗೆ ಅವಕಾಶ ಹೆಚ್ಚು’ ಎಂದು ಐಪಿಎಲ್ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಹೇಳಿದರು.

ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಶಿವಮೊಗ್ಗ ವಲಯದ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರಿಕೆಟ್‌ನಲ್ಲಿ ಎಲ್ಲರೂ ರಾಜ್ಯ, ದೇಶವನ್ನು ಪ್ರತಿನಿಧಿಸುವುದು ಸುಲಭವಲ್ಲ. ಕಠಿಣ ಪರಿಶ್ರಮ, ಶ್ರದ್ಧೆ, ನಿರ್ದಿಷ್ಟ ಗುರಿ ಹೊಂದಿರುವವರು ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತಾರೆ. ಪ್ರತಿಭೆ ಇದ್ದರೂ ಶ್ರದ್ಧೆ, ಪರಿಶ್ರಮ ಇಲ್ಲದೇ ಇದ್ದರೆ ಸಾಧನೆ ಅಸಾಧ್ಯ’ ಎಂದರು.

ADVERTISEMENT

‘ಪ್ರತಿದಿನ ಮುಂಜಾನೆಯಿಂದ ಕನಿಷ್ಠ ನಾಲ್ಕೈದು ಗಂಟೆ ನಿರಂತರವಾಗಿ ಅಭ್ಯಾಸ ಮಾಡಬೇಕು. ಪರಿಶ್ರಮ ಇಲ್ಲದೆ ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲ. ನಿರ್ದಿಷ್ಟ ಗುರಿ ಇಟ್ಟುಕೊಂಡಾಗ ಮಾತ್ರ ಯಶಸ್ಸಿನ ಹಾದಿ ಸುಲಭವಾಗಲಿದೆ’ ಎಂದು ಸಲಹೆ ನೀಡಿದರು.

‘ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್‌ಗೂ ಆದ್ಯತೆ ನೀಡಲಾಗುತ್ತಿದೆ. ಮಹಿಳಾ ಕೆಪಿಎಲ್ ಆಡಿಸುವ ಮೂಲಕ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು. 

ಕೆಎಸ್‌ಸಿಎ ವಲಯ ಸಂಚಾಲಕ ಕೆ.ವಿ.ಮಂಜುನಾಥ ರಾಜು, ಶಿವಮೊಗ್ಗ ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ವಲಯ ಸಂಚಾಲಕ ಎಚ್.ಎಸ್.ಸದಾನಂದ ಉಪಸ್ಥಿತರಿದ್ದರು.

ಕ್ರೀಡಾಪಟುಗಳಿಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಇಲ್ಲಿ ಕ್ರೀಡೆಯ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು
ಬ್ರಿಜೇಶ್ ಪಟೇಲ್ ಐಪಿಎಲ್ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ

ಕೆಎಸ್‌ಸಿಎಯಿಂದ ₹40 ಕೋಟಿ ಬಿಡುಗಡೆ

‘ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆಯುತ್ತಾರೆ. ಇಲ್ಲಿ ನಿಖರತೆ ಜತೆಗೆ ಸಮರ್ಪಣಾ ಮನೋಭಾವವೂ ಬೇಕು. ಅವಕಾಶಗಳು ಸಾಕಷ್ಟಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು.  ‘ಬೆಳಗಾವಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತಿವೆ. ಅದನ್ನು ಇತರೆ ವಲಯಗಳಿಗೂ ವಿಸ್ತರಣೆ ಮಾಡಲಾಗುತ್ತಿದೆ. ಎಲ್ಲ ವಲಯಗಳಿಗೂ ಸೌಲಭ್ಯಗಳನ್ನು ಕಲ್ಪಿಸಲು ಕೆಎಸ್‌ಸಿಎ ಇತಿಹಾಸದಲ್ಲೇ ಮೊದಲ ಬಾರಿಗೆ ₹40 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.