ADVERTISEMENT

ತಾಳಗುಪ್ಪ: 1,200 ಎಕರೆ ಭತ್ತದ ಗದ್ದೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:20 IST
Last Updated 15 ಜುಲೈ 2024, 15:20 IST
ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಮಂಡಗಳಲೆ ಸಮೀಪ ವರದಾ ನದಿ ಪ್ರವಾಹದಿಂದ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡಿರುವುದು
ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಮಂಡಗಳಲೆ ಸಮೀಪ ವರದಾ ನದಿ ಪ್ರವಾಹದಿಂದ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡಿರುವುದು   

ಸಾಗರ: ತಾಲ್ಲೂಕಿನಲ್ಲಿ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರುಣನ ಆರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ.

ವರದಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ತಾಳಗುಪ್ಪ ಹೋಬಳಿಯ ಮಂಡಗಳಲೆ, ಕಾನ್ಲೆ, ಸೈದೂರು ಹಾಗೂ ಸುತ್ತಲಿನ ಗ್ರಾಮಗಳ 1200 ಎಕರೆ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ.

ವಾಡಿಕೆಯಂತೆ ತಾಲ್ಲೂಕಿನಲ್ಲಿ ಪ್ರತಿ ವರ್ಷ ಸರಾಸರಿ 2,400 ಮಿ.ಮೀ. ಮಳೆಯಾಗುತ್ತದೆ. ಈ ವರ್ಷ ಜುಲೈ 1 ರಿಂದ 14ರವರೆಗೆ 378 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ 649 ಮಿ.ಮೀ. ಮಳೆಯಾಗಿದ್ದು ವಾಡಿಕೆಗಿಂತ ಶೇ 71ರಷ್ಟು ಅಧಿಕ ಮಳೆಯಾಗಿದೆ.

ADVERTISEMENT

ಜುಲೈ 8ರಿಂದ 14ರವರೆಗೆ ವಾಡಿಕೆಯಂತೆ 186 ಮಿ.ಮೀ. ಮಳೆಯಾಗಬೇಕಿತ್ತು. ಈ ಅವಧಿಯಲ್ಲಿ 335 ಮಿ.ಮೀ. ಮಳೆಯಾಗಿದೆ. ಮಳೆ ಹೆಚ್ಚಿರುವ ಕಾರಣ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ತಾಲ್ಲೂಕಿನ 12,166 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 1100 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳದ ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

‘ಈ ಮಳೆಗಾಲದ ಆರಂಭದಲ್ಲಿ ಸಸಿಮಡಿಗೆ ನೀರಿನ ಕೊರತೆ ಇರುವ ಕಾರಣ ಬಿತ್ತನೆ ಕಾರ್ಯ ವಿಳಂಬವಾಗಿತ್ತು. ಜುಲೈ ಅಂತ್ಯದೊಳಗೆ ಆನಂದಪುರಂ, ಕಸಬಾ, ತಾಳಗುಪ್ಪ, ಆವಿನಹಳ್ಳಿ ಹೋಬಳಿಯಲ್ಲಿ ಬಿತ್ತನೆ ಕಾರ್ಯ ಸಂಪೂರ್ಣಗೊಳ್ಳುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕುಮಾರ್.

‘ತಾಲ್ಲೂಕಿನ ಕರೂರು, ಬಾರಂಗಿ ಹೋಬಳಿಯಲ್ಲಿ ಅತಿ ಹೆಚ್ಚು ಸಾಂಪ್ರದಾಯಿಕ ತಳಿಯ ಬಿತ್ತನೆ ಬೀಜ ಬಳಸುವುದರಿಂದ ಆಗಸ್ಟ್ ತಿಂಗಳ ಕೊನೆಯವರೆಗೂ ಬಿತ್ತನೆ ಕಾರ್ಯ ನಡೆಸಲಾಗುತ್ತದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಸಂಜೀವ್ ತಿಳಿಸಿದರು.

ಕೃಷಿ ಇಲಾಖೆಯಿಂದ ಈವರೆಗೆ 850 ಕ್ವಿಂಟಲ್ ಭತ್ತ, 90 ಕ್ವಿಂಟಲ್ ಮೆಕ್ಕೆಜೋಳದ ಬಿತ್ತನೆ ಬೀಜ ವಿತರಿಸಲಾಗಿದೆ. 9,141 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈವರೆಗೆ 6,078 ಮೆಟ್ರಿಕ್ ಟನ್ ಸರಬರಾಜು ಆಗಿದ್ದು, 2259 ಮೆಟ್ರಿಕ್ ಟನ್ ಗೊಬ್ಬರದ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ವಾಡಿಕೆಗಿಂತ ಶೇ 50ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆರೆಕಟ್ಟೆಗಳಲ್ಲಿ ನೀರು ತುಂಬದ ಕಾರಣ ಅಂತರ್ಜಲದ ಕೊರತೆ ಉಂಟಾಗಿತ್ತು. ಈ ವರ್ಷ ಉತ್ತಮ ಮಳೆಯಾಗುತ್ತಿರುವುದು ಅಂತರ್ಜಲದ ಪ್ರಮಾಣ ಹೆಚ್ಚುವ ಭರವಸೆ ಮೂಡಿಸಿದೆ.

ಶಾಲಾ–ಕಾಲೇಜುಗಳಿಗೆ ರಜೆ: ಧಾರಾಕಾರ ಮಳೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ಜುಲೈ 16ರಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮಳೆಯಿಂದಾಗಿ ಸಾಗರ ತಾಲ್ಲೂಕಿನ ಸೈದೂರು ಗ್ರಾಮದ ಭತ್ತದ ಗದ್ದೆಯಲ್ಲಿ ನೀರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.