ADVERTISEMENT

ತಮಿಳ್ ಸೆಲ್ವಿ,ಪ್ರೊ.ಶ್ರೀಧರ್‌ಗೆ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:37 IST
Last Updated 4 ನವೆಂಬರ್ 2025, 7:37 IST
ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ತಮಿಳ್ ಸೆಲ್ವಿ  ಅವರಿಗೆ ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು
ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ತಮಿಳ್ ಸೆಲ್ವಿ  ಅವರಿಗೆ ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು   

ತುಮರಿ (ಶಿವಮೊಗ್ಗ ಜಿಲ್ಲೆ): ಇಲ್ಲಿನ ಶಾಂತವೇರಿ ಗೋಪಾಲಗೌಡ ಸಭಾ ಭವನದಲ್ಲಿ ಭಾನುವಾರ ಕಥೆಕೂಟ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಹಾಗೂ ನ್ಯೂಯಾರ್ಕ್‌ನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಮತ್ತು ಭಾರತೀಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎನ್.ಎಸ್‌.ಶ್ರೀಧರ್ ಅವರಿಗೆ ‘ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

‘ಕನ್ನಡ ಸಾಹಿತ್ಯದಲ್ಲಿರುವ ಹಿರಿಮೆಯನ್ನು ಇತರ ಭಾಷೆಗಳಿಗೂ ಪರಿಚಯಿಸಬೇಕು’ ಎಂದು ತಮಿಳ್ ಸೆಲ್ವಿ ಸಲಹೆ ನೀಡಿದರು.

‘ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಸಾಹಿತ್ಯ ಹೊಂದಿದೆ. ಈ ಮಹತ್ವಪೂರ್ಣ ಸಾಹಿತ್ಯಗಳನ್ನು ಬೇರೆ ಬೇರೆ ಭಾಷಿಕರಿಗೆ ಪರಿಚಯಿಸುವ ಕೆಲಸ ನಮ್ಮಲ್ಲಿ ಆಗಿಲ್ಲ. ತೀರಾ ಇತ್ತೀಚೆಗೆ ಒಂದೆರಡು ಪ್ರಯತ್ನ ಬಿಟ್ಟರೆ ದೊಡ್ಡ ಪ್ರಮಾಣದ ಕೆಲಸ ಆಗಿಲ್ಲ. ಹಾಗಾಗಿ ಕನ್ನಡದ ಈ ಸ್ಥಿತಿಗೆ ಒಂದರ್ಥದಲ್ಲಿ ನಾವೇ ಕಾರಣ. ಈಗಲಾದರೂ ಕನ್ನಡದ ಹಿರಿಮೆಯನ್ನು ಬೇರೆ ಭಾಷೆಯವರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ದೆಹಲಿಯಲ್ಲಿ ನಡೆದ ಕಮ್ಮಟವೊಂದರಲ್ಲಿ ಭಾಗವಹಿಸಿದ್ದ ವೇಳೆ ಕುಮಾರವ್ಯಾಸನ ಬಗ್ಗೆ ಮಾತನಾಡಿದರೆ, ಅಲ್ಲಿದ್ದ ಯಾರೊಬ್ಬರಿಗೂ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಅದಕ್ಕಾಗಿ ಕುಮಾರವ್ಯಾಸ ಭಾರತವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದೆ. ಈ ಕೆಲಸಕ್ಕೆ ಕೃಷ್ಣಮೂರ್ತಿ ಹನೂರು, ಎಚ್‌.ಎಸ್‌. ರಾಘವೇಂದ್ರ ರಾವ್‌, ಸಿ.ಎನ್‌. ರಾಮಚಂದ್ರರಾವ್‌ ಕೈಜೋಡಿಸಿದ್ದಾರೆ. ಆ ಕೆಲಸ ಗುರುತಿಸಿ ಪ್ರಶಸ್ತಿ ನೀಡಿರುವುದು ಧನ್ಯತೆ ತಂದಿದೆ’ ಎಂದು ಪ್ರೊ.ಎಸ್.ಎನ್‌. ಶ್ರೀಧರ್ ಹೇಳಿದರು.

‘ಕಥೆಕೂಟ ಕಥಾಜಗತ್ತನ್ನು ವಿಸ್ತರಿಸುವ ಪ್ರಯತ್ನದಲ್ಲಿ ನಿರತವಾಗಿದೆ. 10 ವರ್ಷಗಳಲ್ಲಿ ಇಲ್ಲಿ ಸಾಕಷ್ಟು ಕಥೆಗಾರರು ಬೆಳೆದಿದ್ದಾರೆ. ಕಥೆಯ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಕೃತಿಗಳನ್ನು ನೀಡಿದ್ದಾರೆ. ದಶಮಾನೋತ್ಸವ ಸಂಭ್ರಮ ಸಾರ್ಥಕ ಕ್ಷಣ’ ಎಂದು ಕಥೆಕೂಟದ ಪ್ರಮುಖರಾದ ಗಿರೀಶ್ ರಾವ್‌ ಹತ್ವಾರ್‌ (ಜೋಗಿ) ಹೇಳಿದರು.

‘10 ವರ್ಷಗಳ ಹಿಂದೆ ಮಳೆಗಾಲದ ಒಂದು ದಿನ ಕಟ್ಟಿದ ಕಥೆಕೂಟ ಇಷ್ಟು ದೊಡ್ಡದಾಗಿ ಬೆಳೆದಿರುವುದು ಅಚ್ಚರಿ’ ಎಂದು ಸಂಸ್ಥೆಯ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ ಹೇಳಿದರು.

ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ಕಥೆಕೂಟದ ದಶಮಾನೋತ್ಸವ ಪ್ರಶಸ್ತಿ ಘೋಷಿಸಲಾಯಿತು. ಜಿ.ವೆಂಕಟಸುಬ್ಬಯ್ಯ ಅವರ ಪುತ್ರ ಜಿ.ವಿ. ಅರುಣ, ಕಾದಂಬರಿಕಾರ ಗಜಾನನ ಶರ್ಮಾ, ಸಂಸ್ಕೃತ ವಿದ್ವಾಂಸ ಜಗದೀಶ ಶರ್ಮಾ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ರಂಗ ನಿರ್ದೇಶಕ ಪ್ರಕಾಶ್ ಶೆಟ್ಟಿ, ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ಸದಸ್ಯರು ಇದ್ದರು.

ತುಮರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಎನ್.ಎಸ್‌.ಶ್ರೀಧರ್ ಅವರಿಗೆ ‘ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.