ಸಾಂದರ್ಭಿಕ ಚಿತ್ರ
ಭದ್ರಾವತಿ: ತಾಲ್ಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ಪಾಲಕರು ಬೈಯ್ಯುತ್ತಾರೆ ಎಂದು ಹೆದರಿ ತೋಟದಲ್ಲಿ ಅಡಗಿ ಕುಳಿತಿದ್ದು, ಗ್ರಾಮಸ್ಥರು ನಾಪತ್ತೆ ಶಂಕೆಯಿಂದ ಇಡೀರಾತ್ರಿ ಹುಡುಕಾಟ ನಡೆಸಿದರು.
ಧನುಷ್ (14), ಕಿರಣ್ (10), ಲೋಹಿತ್ (12), ಭುವನ್ (8) ಮತ್ತು ಲಕ್ಷ್ಮೀಶ (12) ಪಾಲಕರಿಗೆ ಹೇಳದೇ ಮೀನು ಹಿಡಿಯಲು ಹೋಗಿದ್ದರು. ಬರುವುದು ತಡವಾಗಿತ್ತು. ಮನೆಗೆ ಹೋದರೆ ಪಾಲಕರು ಬೈಯ್ಯುತ್ತಾರೆ ಎಂದು ಹೆದರಿದ ಮಕ್ಕಳು ಊರಿನ ತೋಟವೊಂದರಲ್ಲಿ ಅಡಗಿ ಕುಳಿತಿದ್ದರು.
ಇದನ್ನು ತಿಳಿಯದ ಪಾಲಕರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಹುಡುಕಾಟ ನಡೆಸಿದರು. ಅವರೊಂದಿಗೆ ಗ್ರಾಮಸ್ಥರೂ ಸೇರಿಕೊಂಡರು. ಸಂಜೆಯಾದರೂ ಮಕ್ಕಳು ಸಿಗದ ಕಾರಣ ಪೊಲೀಸರಿಗೂ ದೂರು ನೀಡಿದರು.
ಪಾಲಕರೊಂದಿಗೆ ಪೊಲೀಸರೂ ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸಿದರು. ರಾತ್ರಿಯಿಡೀ ಹುಡುಕಾಟ ನಡೆಸಿದರೂ ಬಾಲಕರು ಪತ್ತೆಯಾಗಲಿಲ್ಲ.
ಕೊನೆಗೆ ಸೋಮವಾರ ಬೆಳಗಿನ ಜಾವ ಊರಿನಿಂದ 1 ಕಿ.ಮೀ. ದೂರದಲ್ಲಿರುವ ತೋಟದಲ್ಲಿ ಬಾಲಕರು ಪತ್ತೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.