ADVERTISEMENT

ಸತ್ಯದ ಪರ ನಿಲ್ಲುವುದು ಮಾಧ್ಯಮಗಳಿಗೆ ಸವಾಲು: ಅ.ರಾ.ಶ್ರೀನಿವಾಸ್

ಪತ್ರಿಕಾ ದಿನಾಚರಣೆಯಲ್ಲಿ ಲೇಖಕ ಅ.ರಾ.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:18 IST
Last Updated 1 ಆಗಸ್ಟ್ 2021, 1:18 IST
ಸಾಗರದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಾದ ಎಸ್.ವಿ.ಹಿತಕರ ಜೈನ್, ಪ್ರಶಾಂತ್ ಬಾಬು ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಚ್. ಹಾಲಪ್ಪ ಹರತಾಳು ಇದ್ದರು.
ಸಾಗರದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಾದ ಎಸ್.ವಿ.ಹಿತಕರ ಜೈನ್, ಪ್ರಶಾಂತ್ ಬಾಬು ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಚ್. ಹಾಲಪ್ಪ ಹರತಾಳು ಇದ್ದರು.   

ಸಾಗರ: ‘ಸುಳ್ಳುಗಳು ಪ್ರವಾಹದ ರೀತಿ ಹರಿಯುತ್ತಿರುವ ಈ ಹೊತ್ತಿನಲ್ಲಿ ಸತ್ಯದ ಪರವಾಗಿ ನಿಲ್ಲುವುದು ಮತ್ತು ಸತ್ಯವನ್ನೇ ಸ್ಥಾಪಿಸುವುದು ಹೇಗೆ ಎಂಬುದು ಮಾಧ್ಯಮಗಳ ಎದುರು ಇರುವ ಸವಾಲು’ ಎಂದು ಪತ್ರಕರ್ತ, ಲೇಖಕ ಅ.ರಾ.ಶ್ರೀನಿವಾಸ್ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮದ ಹೊಸ ಹೆಜ್ಜೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.
‘ಬದಲಾದ ತಂತ್ರಜ್ಞಾನದಿಂದಾಗಿ ಮಾಧ್ಯಮಗಳ ವ್ಯಾಪ್ತಿ ವಿಸ್ತರಿಸಿದ್ದು, ಅವುಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳಲ್ಲಿ ಯಾವುದು ನಿಜ ಎಂದು ಗೊತ್ತಾಗಲಾರದ ಸ್ಥಿತಿ ನಿರ್ಮಾಣವಾಗಿದೆ.ನೀನು ಸತ್ಯ ಎಂದು ನಂಬಿದ್ದನ್ನು ಬರೆಯಲೇಬೇಕಾಗುತ್ತದೆ. ಈ ವಿಷಯದಲ್ಲಿ ನೀನು ಅಲ್ಪಸಂಖ್ಯಾತನಾದರೂ ಅಡ್ಡಿಯಿಲ್ಲ. ಏಕೆಂದರೆ ಸತ್ಯ ಯಾವತ್ತೂ ಸತ್ಯವೇ ಆಗಿರುತ್ತದೆ’ ಎಂಬ ಗಾಂಧೀಜಿಯವರ ಮಾತನ್ನು ನೆನಪಿಸಿದರು.

ಭಾರತದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ತೋರಿದ ಪತ್ರಿಕೋದ್ಯಮದ ಹಾದಿ ಇಂದಿಗೂ ಮಾದರಿಯಾಗುವಂತಿದೆ.ಪತ್ರಕರ್ತರು ಟೀಕೆ ಮಾಡಬಾರದು ಎಂಬುದು ಆರೋಗ್ಯಕರ ಚಿಂತನೆಯಲ್ಲ. ಪ್ರತಿ
ಯೊಂದು ಮಾಧ್ಯಮವೂ ತಮ್ಮದೇ ಆದ ಆಲೋಚನಾ ಕ್ರಮಗಳನ್ನು ಬೆಳೆಸಿ
ಕೊಳ್ಳುವುದು ಜೀವಂತಿಕೆಯ ಲಕ್ಷಣ. ಆರೋಗ್ಯಪೂರ್ಣ ಸಂವಾದ ಹುಟ್ಟು ಹಾಕುವುದು ಮಾಧ್ಯಮದ ಜವಾಬ್ದಾರಿ. ವಿಮರ್ಶೆ ಇಲ್ಲದ ಸಮಾಜ ನಿಂತ ನೀರಾಗಿ ಸ್ಥಗಿತಗೊಳ್ಳುತ್ತದೆ ಎಂದರು.

ADVERTISEMENT

ಶಾಸಕ ಎಚ್.ಹಾಲಪ್ಪ ಹರತಾಳು, ‘ಇಂದಿಗೂ ನಿಖರವಾದ ಸುದ್ದಿ ನೀಡುವ ಜೊತೆಗೆ ಸುದ್ದಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವುದು ಮುದ್ರಣ ಮಾಧ್ಯಮ. ಈ ಕಾರಣಕ್ಕೆ ಆ ಮಾಧ್ಯಮದಲ್ಲಿ ಬಂದ ಸುದ್ದಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಜನರ ಅರಿವು, ಜ್ಞಾನದ ವಿಸ್ತರಣೆಯ ಕೆಲಸವೂ ಮುದ್ರಣ ಮಾಧ್ಯಮದಿಂದ ನಡೆಯುತ್ತಿದೆ’ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ನೈಜ ಸಂಗತಿಗಳಿಗೆ ಒತ್ತು ನೀಡುವ ಮೂಲಕ ಮಾಧ್ಯಮ ತನ್ನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ವಹಿಸಿದ ಪ್ರಮುಖ ಪಾತ್ರವನ್ನು ಮರೆಯುವಂತಿಲ್ಲ’ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಗೋಪಾಲ್ ಯಡಗೆರೆ, ಶಿವಕುಮಾರ್ ಕೆ.ವಿ., ಹಿರಿಯ ಪತ್ರಕರ್ತರಾದ ಎಸ್.ವಿ.ಹಿತಕರ ಜೈನ್, ಪ್ರಶಾಂತ್ ಬಾಬು ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸುಜಲಾ ಜಿ.ಎನ್. ಅವರನ್ನು ಪುರಸ್ಕರಿಸಲಾಯಿತು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಸದಸ್ಯ ಆರ್.ಶ್ರೀನಿವಾಸ್, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವೈದ್ಯನಾಥ್, ಗ್ರಾಮಾಂತರ ಉಪಾಧ್ಯಕ್ಷ ಎಚ್.ಬಿ.ರಾಘವೇಂದ್ರ ಇದ್ದರು.

ಲೋಕೇಶ್ ಕುಮಾರ್ ಸ್ವಾಗತಿಸಿದರು. ರವಿ ನಾಯ್ಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ರಾನ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.