ADVERTISEMENT

ಈಡಿಗ ಸಮುದಾಯದ ಸಮಾಲೋಚನ ಸಭೆ: ವಿಖ್ಯಾತಾನಂದ ಸ್ವಾಮೀಜಿ ಭಾಗಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 1:49 IST
Last Updated 2 ಆಗಸ್ಟ್ 2021, 1:49 IST
ಶಿವಮೊಗ್ಗ ಈಡಿಗರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಿಂತನ– ಮಂಥನ ಕಾರ್ಯಕ್ರಮದಲ್ಲಿ ರಾಮನಗರ ಸೋಲೂರು ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು
ಶಿವಮೊಗ್ಗ ಈಡಿಗರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಿಂತನ– ಮಂಥನ ಕಾರ್ಯಕ್ರಮದಲ್ಲಿ ರಾಮನಗರ ಸೋಲೂರು ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು   

ಶಿವಮೊಗ್ಗ: ಸಮಾಜದೊಳಗಿನ ಸಂಕುಚಿತ ಮನೋಭಾವದಿಂದ ಚದುರಿ ಹೋಗಿರುವ ಈಡಿಗ ಸಮುದಾಯದ ವಿವಿಧ ಪಂಗಡಗಳನ್ನು ಒಂದುಗೂಡಿಸುವ ಸವಾಲು ಶ್ರೀಮಠದ ಮುಂದಿದೆ ಎಂದು ರಾಮನಗರ ಸೋಲೂರು ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ನಗರದ ಈಡಿಗರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿಗಂದೂರು ದೇವಸ್ಥಾನಕ್ಕೆ ಸರ್ಕಾರದ ಹಸ್ತಕ್ಷೇಪ ಹಾಗೂ ಈಡಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾರಾಯಣ ಗುರುಗಳ ಆದರ್ಶಗಳ ಅಡಿಪಾಯದ ಮೇಲೆ ಯಾವುದೇ ಸಂಘರ್ಷವಿಲ್ಲದೆ ರಾಜ್ಯದಲ್ಲಿ ಈಡಿಗ ಸಮುದಾಯವನ್ನು ಸಂಘಟಿಸುವ ಸಂಕಲ್ಪ ಮಾಡಿದ್ದೇವೆ. ಈಡಿಗ ಮಹಾ ಸಂಸ್ಥಾನವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಉದ್ದೇಶದಿಂದ ಸಮುದಾಯದ ಮಾಹಿತಿ ಒಳಗೊಂಡ ಒಂದು ಸಾಫ್ಟ್‌ವೇರ್ ಸಿದ್ಧವಾಗಿದೆ. ವಿದ್ಯೆ, ಸೂರು, ಆರೋಗ್ಯ ಹಾಗೂ ಉದ್ಯೋಗವನ್ನೇ ಆದ್ಯತೆಯಾಗಿಟ್ಟು ಕೊಂಡು ಸಮುದಾಯದ ಮುಂದೆ ಮಠ ಹೋಗಲಿದೆ’ ಎಂದು ತಿಳಿಸಿದರು.

ADVERTISEMENT

ಸಿಗಂದೂರು ದೇಗುಲ ಸಮಾಜದ ಆಸ್ತಿ: ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ ಮಾತನಾಡಿ, ‘ಸಿಗಂದೂರು ದೇಗುಲ ಸಮಾಜದ ಆಸ್ತಿ. ಅದನ್ನು ರಕ್ಷಿಸಿ ಪೋಷಿಸುವ ಜವಾಬ್ದಾರಿ ಸಮಾಜಕ್ಕಿದೆ. ದೇಗುಲದಿಂದ ಜಾತ್ಯತೀತವಾಗಿ ಸಮಾಜಮುಖಿ ಕೆಲಸ ಮಾಡಲಾಗಿದೆ.
ಈ ಕ್ಷೇತ್ರ ನಮ್ಮ ಬಳಿ ಇದ್ದರೆ ಸಮಾಜಸೇವೆಗೆ ಶಕ್ತಿಬರುತ್ತದೆ. ಶಕ್ತಿವಂತೆ ದೇವತೆಯ ವಿಚಾರದಲ್ಲಿ ಅನ್ಯಾಯದ ಕೆಲಸ ಯಾರೇ ಮಾಡಿದರೂ ತಕ್ಕ ಫಲ ಉಣ್ಣುತ್ತಾರೆ. ಸರ್ಕಾರ ಮುಜರಾಯಿ ಇಲಾಖೆಗೆ ಸೇರಿಸುವ ಪ್ರಕ್ರಿಯೆ ಮಾಡುತ್ತಿದ್ದರೆ ನಮ್ಮದೇ ಸಮುದಾಯದ ಸಚಿವರು ಮತ್ತು ಶಾಸಕರು ಸುಮ್ಮನೆ ಇರುವುದು ದುರಂತವೇ ಸರಿ’ ಎಂದರು.

ರಾಜ್ಯ ಈಡಿಗ ಸಂಘದ ಅಧ್ಯಕ್ಷ ಡಾ.ತಿಮ್ಮೇಗೌಡ ಮಾತನಾಡಿ, ‘ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಹಿಂದೆ ರಾಜ್ಯದ 55 ಲಕ್ಷ ಈಡಿಗರಿದ್ದೇವೆ. ಸರ್ಕಾರ ಈ ವಿಚಾರದಲ್ಲಿ ಅನ್ಯಾಯ ಮಾಡಿದರೆ ಬೀದಿಗಿಳಿಯುತ್ತೇವೆ. ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಬಂಗಾರಪ್ಪ ಇದ್ದ ಅವಧಿಯಲ್ಲಿ ನಮ್ಮನ್ನು ಯಾರೂ ಮುಟ್ಟುತ್ತಿರಲಿಲ್ಲ. ಅಂತಹ ಗಟ್ಟಿತನ ಬರಲು ಒಗ್ಗಟ್ಟು ಮುಖ್ಯ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯ ಬಂಡಿ ರಾಮಚಂದ್ರ, ರಾಜ್ಯ ಬಿಲ್ಲವರ ಸಂಘದ ಅಧ್ಯಕ್ಷ ವೇದಕುಮಾರ್, ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿದರು. ಈಡಿಗ ಸಂಘದ ಯುವ ಘಟಕದ ದುಷ್ಯಂತ, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೆಯ, ಡಾ.ರಾಜನಂದಿನಿ ಕಾಗೋಡು, ಸುರೇಶ್ ಬಾಳೇಗುಂಡಿ, ಪರಶುರಾಮಪ್ಪ, ಅಜ್ಜಪ್ಪ, ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಪ್ರವೀಣ ಹಿರೇಇಡಗೋಡು, ನಾಗರಾಜ್ ಕೈಸೋಡಿ, ಕಲ್ಲಪ್ಪ ಇದ್ದರು.

***

ಸಿಗಂದೂರು ದೇಗುಲ: ಮುಜರಾಯಿ ಇಲಾಖೆಗೆ ಸೇರಿಸಲು ಬಿಡೆವು

ಸಿಗಂದೂರು ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ಸೇರಿಸಲು ಬಿಡುವುದಿಲ್ಲ. ಇದಕ್ಕೂ ಒಂದು ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಗುವುದು. ಸಮುದಾಯದ ಧಾರ್ಮಿಕ ಕೇಂದ್ರದ ಬಗ್ಗೆ ಈಡಿಗ ಸಮುದಾಯಕ್ಕಿರುವ ನಂಬಿಕೆಗೆ ಸರ್ಕಾರ ಗೌರವ ಕೊಡಬೇಕಾಗುತ್ತದೆ.

– ವಿಖ್ಯಾತಾನಾಂದ ಸ್ವಾಮೀಜಿ, ರಾಮನಗರ ಸೋಲೂರು ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.