ADVERTISEMENT

ಹಕ್ಕುಪತ್ರ ನೀಡುವವರೆಗೆ ಹೋರಾಟ ನಿಲ್ಲದು

ಶರಾವತಿ ಮುಳುಗಡೆ ಸಂತ್ರಸ್ತರ ಪಾದಯಾತ್ರೆಯಲ್ಲಿ ಕಾಗೋಡು ತಿಮ್ಮ‍ಪ್ಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 6:44 IST
Last Updated 27 ಸೆಪ್ಟೆಂಬರ್ 2021, 6:44 IST
ತೀರ್ಥಹಳ್ಳಿ ತಾಲ್ಲೂಕು ಕಲ್ಲುಕೊಪ್ಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಳುಗಡೆ ಸಂತ್ರಸ್ತರ ಪಾದಯಾತ್ರೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು
ತೀರ್ಥಹಳ್ಳಿ ತಾಲ್ಲೂಕು ಕಲ್ಲುಕೊಪ್ಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಳುಗಡೆ ಸಂತ್ರಸ್ತರ ಪಾದಯಾತ್ರೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು   

ಶಿವಮೊಗ್ಗ: ನಾಡಿಗೆ ಬೆಳಕು ನೀಡಿದವರು ಇಂದು ಭೂಮಿ ಹಕ್ಕಿಗಾಗಿ ಪರದಾಡುವ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬೇಸರ
ವ್ಯಕ್ತಪಡಿಸಿದರು.

ಶರಾವತಿ, ವರಾಹಿ ಚಕ್ರ ಮತ್ತು ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಲ್ಲುಕೊಪ್ಪದಿಂದ ತೀರ್ಥಹಳ್ಳಿವರೆಗೆ ಹಮ್ಮಿಕೊಂಡಿದ್ದ 3 ದಿನಗಳ ಪಾದಯಾತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲದು. 60 ವರ್ಷಗಳಿಂದ ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಪರಿಹರಿಸಿ ಅಧಿಕಾರದಲ್ಲಿ ತಮ್ಮ ಜೀವಂತಿಕೆಯನ್ನು ಪ್ರದರ್ಶಿಸಬೇಕುಎಂದು ಗುಡುಗಿದರು.

ADVERTISEMENT

1962ರಿಂದ ಲಿಂಗನಮಕ್ಕಿ ಜಲಾಶಯಕ್ಕಾಗಿ ಶರಾವತಿ ನದಿಪಾತ್ರದ 504 ಹಳ್ಳಿಗಳು ಮುಳುಗಡೆಯಾಗಿ, 25 ಸಾವಿರ ಕುಟುಂಬಗಳ 3 ಲಕ್ಷ ರೈತರು ನಿರಾಶ್ರಿತರಾದರು. 5000 ಹೆಕ್ಟೇರ್ ಕೃಷಿ ಭೂಮಿ ಮುಳುಗಡೆ ಆಗಿತ್ತು. ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ, ಕಲ್ಲುಕೊಪ್ಪ, ಅರನಲ್ಲಿ, ಕೆರೆಹಳ್ಳಿ, ಕನ್ನಂಗಿ, ಸಂಕ್ಲಾಪುರ, ಅಲಸೆ, ಮತ್ತಿತರ ಕಡೆ ನೆಲೆಸಿದರು. ಕೆಲವರು ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ಹೊಳೆಹೊನ್ನೂರು, ಸಾಗರದಲ್ಲಿ ನೆಲೆಸಿದರು.ಹಿರೇಭಾಸ್ಕರ ಮತ್ತು ಮಾಣಿ ಜಲಾಶಯದಲ್ಲಿ ಸಂತ್ರಸ್ತರಾಗಿರುವ ಇವರಿಗೆ ಇದುವರೆಗೆ ನ್ಯಾಯಯುತ ಪರಿಹಾರ ದೊರೆತಿಲ್ಲ ಎಂದು ದೂರಿದರು.

ಶರಾವತಿ ಸಂತ್ರಸ್ತರು ಉಳುಮೆ ಮಾಡುತ್ತಿರುವ ಕೃಷಿಭೂಮಿಯನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಅಭಯಾರಣ್ಯ ಅಕ್ರಮ ಭೂಕಬಳಿಕೆ ಪ್ರಕರಣದ ಮೂಲಕ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಮುಳುಗಡೆ ಸಂತ್ರಸ್ತರೆಲ್ಲರಿಗೂ ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ಆರ್.ಎಂ. ಮಂಜುನಾಥಗೌಡ ಮಾತನಾಡಿ, ‘ನಾಗರಿಕ ಸೌಲಭ್ಯವೇ ಇಲ್ಲದ ಪ್ರದೇಶದಲ್ಲಿ ತಂದು ಹಾಕಿರುವ ಮುಳುಗಡೆ ಸಂತ್ರಸ್ತರಿಗೆ ಭೂಮಿಯನ್ನು ಮಂಜೂರು ಮಾಡಲು ಸರ್ಕಾರಗಳಿಗೆ ಇಚ್ಛಾಶಕ್ತಿ ಇಲ್ಲ.ಈ ಸಮಸ್ಯೆ ಕೊನೆಗಾಣುವವರೆಗೂ ಹೋರಾಟ ನಿಲ್ಲದು’ ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಅದ್ಯಕ್ಷ ಗೋಪಾಲ ನಾಯ್ಕ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ತೀ.ನಾ. ಶ್ರೀನಿವಾಸ್, ಎಚ್. ಪದ್ಮನಾಭ, ಟಿ.ಎಲ್. ಸುಂದರೇಶ್, ಬಿ.ಆರ್. ಜಯಂತ್, ವಕೀಲ ಕೆ.ಪಿ. ಶ್ರೀಪಾಲ,ಕೆ.ಎಲ್. ಅಶೋಕ್ ಇದ್ದರು.

‘ಅಧಿಕಾರಿಗಳಿಗೂ ಬುದ್ಧಿ ಕಲಿಸೋಣ’

‘ಈ ಕ್ಷೇತ್ರವನ್ನು ಪ್ರತಿನಿಧಿಸುವವರಿಗೆ ಸಂತ್ರಸ್ತರ ಗೋಳಿನ ಅರಿವಿಲ್ಲ. ಇಲ್ಲಿ ಆರಂಭಗೊಂಡಿರುವ ಹೋರಾಟದಲ್ಲಿ ಈ ಸಮಸ್ಯೆಯನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ಯಬೇಕಿದೆ. ನ್ಯಾಯ ಸಿಗದಿದ್ದರೆ ಈ ಜನರಿಗೆ ಮುಖ ತೋರಿಸುವ ನೈತಿಕತೆ ನಮಗಿರಲ್ಲ. ಸಂತ್ರಸ್ತರ ಹೆಸರುಗಳನ್ನು ಪಟ್ಟಿ ಮಾಡಿ ನನಗೆ ಕೊಡಿ. ನಾನೇ ಬರುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ಇದಕ್ಕೆಸ್ಪಂದಿಸದಿದ್ದಲ್ಲಿ ಅವರಿಗೂ ಬುದ್ಧಿ ಕಲಿಸೋಣ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಗುಡುಗಿದರು.

‘ಕಿಮ್ಮನೆಗೆ ಆಗಾಗ ನಮ್ಮ ಮೇಲೆ ಪ್ರೀತಿ ಹುಟ್ಟುತ್ತೆ’

‘ಕಿಮ್ಮನೆ ರತ್ನಾಕರ ಅವರಿಗೆ ನನ್ನ ಮೇಲೆ ಆಗಾಗ ಪ್ರೀತಿ ಹುಟ್ಟುತ್ತದೆ. ಹೀಗಾಗಿ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಅದನ್ನು ನಾನು ಆಶೀರ್ವಾದ ಎಂದು ತಿಳಿದುಕೊಂಡಿದ್ದೇನೆ’ ಎಂದು ಆರ್‌.ಎಂ. ಮಂಜುನಾಥ್ ಗೌಡ ತಿಳಿಸಿದರು.

ಪಾದಯಾತ್ರೆಗೂ ಮುನ್ನ ಅವರು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ನಾನು ಅವರೊಂದಿಗೆ ಜಗಳವಾಡಿಲ್ಲ. ಹಾಗಾಗಿ ಸರಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಸಮಸ್ಯೆ ಸರಿ‍ಪಡಿಕೊಳ್ಳುವ ಮೊದಲು ಮನಸ್ಸುಗಳನ್ನು ಸರಿಪಡಿಸಿಕೊಳ್ಳೋಣ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.