ADVERTISEMENT

ಸೊರಬ: ಹಕ್ಕುಪತ್ರ ವಿತರಣೆ ಹಿಂದೆ ಕಾಗೋಡು ಶ್ರಮ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:35 IST
Last Updated 19 ಮೇ 2025, 14:35 IST
ಸೊರಬ ಪಟ್ಟಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘94ಸಿ’ ಹಕ್ಕುಪತ್ರ, ಕಂದಾಯ ಇಲಾಖಾ ನೌಕರರಿಗೆ ಬಹುಮಾನ ವಿತರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆಯನ್ನು‌ ಸಚಿವ ಮಧು ಬಂಗಾರಪ್ಪ‌ ನೆರವೇರಿಸಿದರು
ಸೊರಬ ಪಟ್ಟಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘94ಸಿ’ ಹಕ್ಕುಪತ್ರ, ಕಂದಾಯ ಇಲಾಖಾ ನೌಕರರಿಗೆ ಬಹುಮಾನ ವಿತರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆಯನ್ನು‌ ಸಚಿವ ಮಧು ಬಂಗಾರಪ್ಪ‌ ನೆರವೇರಿಸಿದರು   

ಸೊರಬ: ‘ಬಡವರನ್ನು ಭೂ ಒಡೆಯರನ್ನಾಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ‘94 ಸಿ’ ಅಡಿಯಲ್ಲಿ ಹಕ್ಕುಪತ್ರ ಕೊಡುವ ಬಿಲ್ ಪಾಸ್‌ ಮಾಡಿರುವುದರ ಹಿಂದೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮವಿದೆ. ಅವರ ಸಾರ್ವಜನಿಕ ಜೀವನದಲ್ಲಿ ಬಡವರಿಗೆ ಯೋಜನೆ ರೂಪಿಸಲು ಹೊಂದಿದ್ದ ಕಾಳಜಿಯನ್ನು ಮೆಚ್ಚಬೇಕು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಮರಿಸಿದರು.

ಸೋಮವಾರ ಪಟ್ಟಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘94ಸಿ’ ಹಕ್ಕುಪತ್ರ, ಕಂದಾಯ ಇಲಾಖಾ ನೌಕರರಿಗೆ ಬಹುಮಾನ ವಿತರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಬಡವರು ಕೂಡ ಯೋಗ್ಯ ಜೀವನ ಸಾಗಿಸಲು ಸರ್ಕಾರ ಆದ್ಯತೆ ನೀಡಿದೆ. ಆಧುನಿಕ ಸಮಾಜದಲ್ಲಿ ಗೌರವಯುತ ಬದುಕು ಅವರದ್ದಾಗಲಿ ಎನ್ನುವ ಕಾರಣಕ್ಕೆ 94ಸಿ ಅಡಿಯಲ್ಲಿ ಹಕ್ಕುಪತ್ರ ಪಡೆಯಲು ಕಾನೂನು ತೊಡಕುಗಳನ್ನು ನಿವಾರಿಸಲು ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ವಿಶೇಷ ಆಸಕ್ತಿವಹಿಸಿದ್ದರಿಂದ ಇಂದು ಮಸೂದೆ ಪಾಸಾಗಿದೆ. ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಸವಿನೆನಪಿಗಾಗಿ ಬಳ್ಳಾರಿಯಲ್ಲಿ ಮೇ 20ರಂದು ತಾಂಡಾಗಳಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಭೂ ಹಕ್ಕು ನೀಡುವ ನಿಟ್ಟಿನಲ್ಲಿ ಅಂದಾಜು 1,11,164 ಜನರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ‌’ ಎಂದು ತಿಳಿಸಿದರು.

‘ನೀವು ನೀಡಿದ ಮತದಾನಕ್ಕೆ ಸಾರ್ಥಕತೆ ಸಿಗುವ ರೀತಿಯಲ್ಲಿ ಸಚಿವನಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದೇನೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಿದ ಮೊದಲ ರಾಜ್ಯವಾಗಿದೆ. ಬಹುತೇಕ ವಿದ್ಯಾರ್ಥಿಗಳು 625ಕ್ಕೆ 623 ಅಂಕಗಳನ್ನು ಪಡೆದಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಬೇಕು’ ಎಂದರು.

ತಹಶೀಲ್ದಾರ್ ಮಂಜುಳಾ ಹೆಗಡಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳ ‌ನಿವಾಸಿಗಳಿಗೆ ಸಚಿವ ಮಧು ಬಂಗಾರಪ್ಪ ಹಕ್ಕುಪತ್ರ ವಿತರಿಸಿದರು.

ಸಾಗರ ಉ‌ಪವಿಭಾಗಾಧಿಕಾರಿ ವೀರೇಶ್‌ ಕುಮಾರ್, ಪಟ್ಟಣ ಪಂಚಾಯಿತಿ ಇಒ ಶಶಿಧರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ನೇತ್ರಾವತಿ, ಪುರಸಭೆ ಮುಖ್ಯಾಧಿಕಾರಿ ಚಂದನ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಉಪಾಧ್ಯಕ್ಷೆ ಶ್ರೀರಂಜನಿ ಪ್ರವೀಣಕುಮಾರ್, ತಬಲಿ ಬಂಗಾರಪ್ಪ, ಅಣ್ಣಪ್ಪ ಹಾಲಘಟ್ಟ, ಗಣಪತಿ ಹುಲ್ತಿಕೊಪ್ಪ, ಅಂಜಲಿ, ಅನ್ಸರ್ ಅಹಮದ್, ಕಲ್ಲಂಬಿ ಹಿರಿಯಣ್ಣ, ಕೆ.ಪಿ.ರುದ್ರಗೌಡ, ಸದಾನಂದಗೌಡ, ಸಿಡಿಪಿಒ ಮಂಜಪ್ಪ, ಬಿಇಒ ಪುಷ್ಪಾ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.