ADVERTISEMENT

ಹೆಚ್ಚುತ್ತಲೇ ಇದೆ ಭದ್ರಾ ಜಲಾಶಯದ ಒಳಹರಿವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 4:53 IST
Last Updated 9 ಆಗಸ್ಟ್ 2022, 4:53 IST
ಭದ್ರಾ ಜಲಾಶಯ
ಭದ್ರಾ ಜಲಾಶಯ   

ಶಿವಮೊಗ್ಗ: ಕುದುರೆಮುಖ, ಕೊಪ್ಪ, ಬಾಳೆಹೊನ್ನೂರು ಸೇರಿ ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದೆ. ಹೀಗಾಗಿ, ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಒಳಹರಿವು ಪ್ರತಿ ಗಂಟೆಗೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಭದ್ರಾ ಜಲಾಶಯಕ್ಕೆ ಸೋಮವಾರ ಬೆಳಿಗ್ಗೆ 40,194 ಕ್ಯುಸೆಕ್ ಒಳಹರಿವು ಇತ್ತು. ಹೀಗಾಗಿ 41,386 ಕ್ಯುಸೆಕ್ ಹೊರಬಿಡಲಾಗಿತ್ತು. ಸಂಜೆ ವೇಳೆ ಒಳಹರಿವು ಪ್ರಮಾಣ 65 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿದ್ದು, ನದಿಗೆ 55 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಒಳಹರಿವಿನ ಪ್ರಮಾಣದಷ್ಟೇ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಹಾದಿಯಲ್ಲಿಯೇ ಇದೆ. ರಾತ್ರಿ ಮಳೆಯ ಪ್ರಮಾಣವೂ ಏರಿಕೆಯಾಗಿದ್ದು, ಜಲಾಶಯಕ್ಕೆ ಬರುವ ಹೆಚ್ಚುವರಿ ನೀರನ್ನು ಹೊರಗೆ ಬಿಡುವುದರಿಂದ ನದಿ ಪಾತ್ರದ ಭದ್ರಾವತಿ ನಗರ, ಹೊಳೆಹೊನ್ನೂರು ಪಟ್ಟಣ ಹಾಗೂ ದಂಡೆ ಭಾಗದ ಹಳ್ಳಿಗಳಲ್ಲಿ ಪ್ರವಾಹದ ಆತಂಕ ಹೆಚ್ಚಳವಾಗಿದೆ. ಜಿಲ್ಲಾಡಳಿತ ರೆಡ್‌ ಅಲರ್ಟ್ ಘೋಷಿಸಿದೆ.

ADVERTISEMENT

ಭದ್ರಾವತಿ ನಗರದ ಹೊಸ ಸೇತುವೆ ಜಲಾವೃತವಾಗಿದ್ದು, ಮುಂಜಾಗರೂಕತಾ ಕ್ರಮವಾಗಿ ತರೀಕೆರೆ ರಸ್ತೆಯ ಉಳ್ಳವರ್ ಕಲ್ಯಾಣಮಂಟಪ ಹಾಗೂ ಹುಡ್ಕೊ ಕಾಲೊನಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರಗಳ ತೆರೆಯಲಾಗಿದೆ. ನದಿ ತೀರದಲ್ಲಿ ಅಪಾಯದ ಮಟ್ಟದಲ್ಲಿ ವಾಸಿಸು
ತ್ತಿರುವವರನ್ನು ಅಲ್ಲಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.