ತೀರ್ಥಹಳ್ಳಿ: ಕೈಮರ- ಯಡೂರು ರಸ್ತೆಯ ಅಕ್ಕಪಕ್ಕದ ನಿವಾಸಿಗಳು ರಾತ್ರಿ ಮನೆಯಲ್ಲಿ ನೆಮ್ಮದಿಯ ನಿದ್ದೆ ಮಾಡಲು ಆತಂಕ ಪಡುವಂತಾಗಿದೆ. ತಿರುವುಗಳಲ್ಲಿ ವೇಗವಾಗಿ ಚಲಿಸುವ ಬೃಹತ್ ವಾಹನಗಳು ಅಪಘಾತಕ್ಕೀಡಾಗಿ ಮನೆಗಳೆದುರು ಹಾಕಲಾದ ಕಂಪೌಂಡ್, ಬೇಲಿಗಳನ್ನು ದಾಟಿ ಒಳಬಂದು ಅಪಾಯ ಉಂಟು ಮಾಡುತ್ತಿವೆ.
ಹಾಲಿಗೆ, ಸುಣ್ಣದಮನೆ, ಕವರಿ, ಮೇಕೇರಿ, ಉಳುಕೊಪ್ಪ, ಕವಲೇದುರ್ಗಾ ತಿರುವುಗಳು ಅಪಾಯಕಾರಿಯಾಗಿದೆ. ತಡೆಗೋಡೆ, ಪ್ರತಿಫಲಕಗಳನ್ನು ನಿರ್ಮಿಸದ ಕಾರಣದಿಂದ ರಾತ್ರಿ ಚಲಿಸುವ ವಾಹನಗಳು ಅಡ್ಡಾದಿಡ್ಡಿಯಾಗಿ ಹೋಗುತ್ತಿವೆ. ಬೈಕ್, ಕಾರುಗಳು, ಲಾರಿ, ಬಸ್‌ಗಳ ಬೆಳಕುಗಳಿಗೆ ವಿಚಲಿತಗೊಂಡು ನಿತ್ಯ ಅಪಘಾತದ ವಲಯವಾಗಿ ಇಲ್ಲಿನ ರಸ್ತೆಗಳು ಗುರುತಿಸಿಕೊಂಡಿವೆ.
ತೀರ್ಥಹಳ್ಳಿ, ಮಾಸ್ತಿಕಟ್ಟೆ, ಕುಂದಾಪುರ, ಉಡುಪಿ, ಮಂಗಳೂರು ಕಡೆ ತೆರಳುವ 10, 12 ಚಕ್ರಗಳ ಭಾರಿ ವಾಹನಗಳು ಇದೇ ಮಾರ್ಗವಾಗಿ ಹೋಗುತ್ತವೆ. ರಾತ್ರಿಯ ವೇಳೆ ಈ ಭಾಗದಲ್ಲಿ ಸಂಚರಿಸಿದರೆ ಕನಿಷ್ಠ 2 ವಾಹನಗಳ ಬ್ರೇಕ್ ಫೇಲ್, ಚಾಸಿ ಕಡಿತ, ಪಂಕ್ಚರ್ ಆಗಿ ನಿಂತಿರುವ ವಾಹನಗಳು ಕಾಣಿಸುತ್ತವೆ. ಅಂತಹ ಸಂದರ್ಭದಲ್ಲಿ ಮತ್ತೊಂದು ವಾಹನದ ಸಹಾಯ ಪಡೆದು ಮುಂದುವರಿಯಬೇಕು ಅಥವಾ ರಾತ್ರಿ ಕಾಡಿನ ದಾರಿಯಲ್ಲಿಯೇ ಜೀವಿಸಬೇಕಾಗಿದೆ.
‘ಮಳೆಗಾಲಕ್ಕೂ ಮುನ್ನ ₹ 2 ಕೋಟಿ ವೆಚ್ಚದಲ್ಲಿ ಎಂ.ಕೆ. ಬೈಲು ಸಮೀಪದಲ್ಲಿ ನಿರ್ಮಿಸಿದ್ದ ರಸ್ತೆಯು ವಾಹನಗಳ ಸಂಚಾರದಿಂದ ಕುಸಿದಿದೆ. ಈಗಾಗಲೇ ಹೊಂಡ ಮತ್ತು ಗುಂಡಿಗಳು ನಿರ್ಮಾಣವಾಗಿದ್ದು ಮುಂದಿನ ಮಳೆಗಾಲ ಪುನಃ ರಸ್ತೆ ಅಭಿವೃದ್ಧಿ ಮಾಡಬೇಕಾದ ಸ್ಥಿತಿ ಇದೆ. ರಸ್ತೆಗಳು ವರ್ಷದೊಳಗೆ ಹಾಳಾಗಿದ್ದು, ಕೆಲವು ಭಾಗದಲ್ಲಿ ಹೊಂಡಗಳನ್ನು ಮಾತ್ರ ಮುಚ್ಚಲಾಗಿದೆ. ಮಳೆ ಸುರಿದಾಗ ಅವೆಲ್ಲವೂ ಮತ್ತೆ ತೆರೆದುಕೊಂಡಿದ್ದು ಕಾಮಗಾರಿ ವ್ಯರ್ಥವಾಗಿದೆ’ ಎಂದು ಸ್ಥಳೀಯರಾದ ಪ್ರೇಮ್ ಯಡೂರು ದೂರುತ್ತಾರೆ.
ತೀರ್ಥಹಳ್ಳಿ ಮತ್ತು ಹೊಸನಗರ ಲೋಕೋಪಯೋಗಿ ವಿಭಾಗಕ್ಕೆ ಸೇರಿದ ರಸ್ತೆಗಳ ನಿರ್ವಹಣೆ ಮಾತ್ರ ಸಮರ್ಪಕವಾಗಿಲ್ಲ. ರಾತ್ರಿ ಸಂಚರಿಸುವವರ ಅನುಕೂಲಕ್ಕಾಗಿ ರೇಡಿಯಂ ಸ್ಟಿಕ್ಕರ್ ಮತ್ತು ರಸ್ತೆಯ ಅಂಚಿಗೆ ಬಿಳಿ, ಹಳದಿ ಪಟ್ಟೆಗಳನ್ನು ಹಾಕಿಲ್ಲ. ಸ್ಟೀಲ್ ತಡೆಗೋಡೆಗಳ ಹಾಕಿಲ್ಲದ್ದರಿಂದ ಅಪಘಾತ ಹೆಚ್ಚಾಗಿ ಸಂಭವಿಸುತ್ತಿವೆ. ರಾತ್ರಿ ಮನೆಗಳಲ್ಲಿ ನೆಮ್ಮದಿಯ ನಿದ್ದೆ ಮಾಡುವಂತೆಯೂ ಇಲ್ಲ ಎಂದು ನಿವಾಸಿಗಳು ಬೇಸರಿಸುತ್ತಾರೆ.
ಒಂದು ವರ್ಷದಲ್ಲಿ 30ಕ್ಕೂ ಅಧಿಕ ಅಪಘಾತ
ಅಪಾಯಕಾರಿ ತಿರುವುಗಳಲ್ಲಿ ಒಂದು ವರ್ಷದಲ್ಲಿ 30ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ನಿತ್ಯವೂ ಹಲವು ವಾಹನಗಳು ಕೆಟ್ಟು ನಿಲ್ಲುವುದರಿಂದ ರಾತ್ರಿವೇಳೆ ವೇಗವಾಗಿ ಸಾಗುವ ವಾಹನಗಳಿಂದ ಅಪಘಾತ ತಪ್ಪಿದ್ದಲ್ಲ ಎಂಬ ಆತಂಕ ಹಲವರದ್ದಾಗಿದೆ.