ADVERTISEMENT

ಹೊಸನಗರ: ಟ್ಯಾಂಕ್ ಏರಿ ಪ್ರತಿಭಟಿಸಿದ ಗ್ರಾ.ಪಂ ಅಧ್ಯಕ್ಷ

ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 6:28 IST
Last Updated 3 ಫೆಬ್ರುವರಿ 2023, 6:28 IST
ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಹೂವಿನಕೋಣೆ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಆಗ್ರಹಿಸಿ ಟ್ಯಾಂಕ್ ಏರಿ ಪ್ರತಿಭಟನೆ ನಡೆಸಿದರು.
ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಹೂವಿನಕೋಣೆ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಆಗ್ರಹಿಸಿ ಟ್ಯಾಂಕ್ ಏರಿ ಪ್ರತಿಭಟನೆ ನಡೆಸಿದರು.   

ಹೊಸನಗರ: ‘ಗ್ರಾಮದಲ್ಲಿ ಕುಡಿಯುವ ನೀರು ಸಂಗ್ರಹ ಟ್ಯಾಂಕ್ ಸಂಪೂರ್ಣ ಹಾಳಾಗಿದೆ. ಇದರಲ್ಲಿ ನೀರು ಸಂಗ್ರಹ ಯೋಗ್ಯವಲ್ಲ ಎಂದು ಸಾಬೀತಾಗಿದೆ. ನೂತನ ಟ್ಯಾಂಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಸಹಕರಿಸುತ್ತಿಲ್ಲ. ಕೂಡಲೇ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿ ಮಾರುತೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಹೂವಿನಕೋಣೆ ಟ್ಯಾಂಕ್ ಏರಿ ಪ್ರತಿಭಟಿಸಿದರು.

ಇದಕ್ಕೆ ಉಪಾಧ್ಯಕ್ಷರು, ಸದಸ್ಯರು ಬೆಂಬಲ ನೀಡಿದರು. ಕೆಲ ಸದಸ್ಯರು ಅಧ್ಯಕ್ಷರ ಜತೆ ಟ್ಯಾಂಕ್ ಏರಿ ಕುಳಿತು ಸಹಮತ ಸೂಚಿಸಿದರು.

ಗ್ರಾಮದಲ್ಲಿ ಹಳೆಯದಾದ ಟ್ಯಾಂಕ್ ಇದೆ. ಇದರಿಂದಲೇ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಬೇಕಾಗಿದೆ. ಕೆಲ ವರ್ಷಗಳಿಂದ ಈ ಟ್ಯಾಂಕ್ ಸೋರುತ್ತಿದ್ದು, ನೀರು ಸಂಗ್ರಹಕ್ಕೆ ಯೋಗ್ಯವಾಗಿಲ್ಲ. ಟ್ಯಾಂಕ್ ಒಳಗೆ ಪಾಚಿಕಟ್ಟಿ ಕೊಳೆತು ನಾರುತ್ತಿದೆ. ಮೇಲೆ ಗಿಡಗಂಟಿ ಬೆಳೆದಿವೆ. ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದೆ. ಹೊಸ ಟ್ಯಾಂಕ್ ನಿರ್ಮಾಣ ಆದೇಶ ಬರುವವರೆಗೂ ಟ್ಯಾಂಕ್‌ನಿಂದ ಇಳಿಯುವುದಿಲ್ಲ ಎಂದು ಚಿದಂಬರ್ ಹೂವಿನಕೋಣೆ ತಿಳಿಸಿದರು.

ADVERTISEMENT

‘ಹೊಸ ಟ್ಯಾಂಕ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ₹ 12 ಲಕ್ಷ ಅನುದಾನ ಇಟ್ಟಿದೆ. ಆದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಲು ಸಹಕಾರ ನೀಡುತ್ತಿಲ್ಲ. ಜಲಜೀವನ ಯೋಜನೆ ಅಡಿಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯ ಮಾಡಲಾಗುತ್ತಿದೆ. ಟ್ಯಾಂಕ್ ನಿರ್ಮಾಣಕ್ಕೆ ನೂರೆಂಟು ವಿಘ್ನಗಳು ಬರುತ್ತಿವೆ. ಇತ್ತ ಟ್ಯಾಂಕ್ ದಿನದಿಂದ ದಿನಕ್ಕೆ ಕುಸಿಯುವ ಭೀತಿ ಎದುರಿಸುತ್ತಿದೆ. ಸಂಪೂರ್ಣ ಹಾಳಾದ ಟ್ಯಾಂಕ್ ನಾಶಪಡಿಸಿ ಹೊಸ ಟ್ಯಾಂಕ್ ನಿರ್ಮಾಣ ಆಗಬೇಕಿದೆ’ ಎಂದರು.

ವಿದ್ಯಾರ್ಥಿಗಳು ಓಡಾಡುವ ಜಾಗ: ‘ಟ್ಯಾಂಕ್ ಸಮೀಪ ಎರಡು ಶಾಲೆಗಳು ಇವೆ. ಟ್ಯಾಂಕ್ ಪಕ್ಕದಲ್ಲೇ ಮಕ್ಕಳು ಓಡಾಡುತ್ತಾರೆ. ಒಮ್ಮೆ ಟ್ಯಾಂಕ್ ಕುಸಿದು ಬಿದ್ದರೆ ದೊಡ್ಡ ಅನಾಹುತ ನಡೆಯುವ ಸಾಧ್ಯತೆ ಇದೆ. ಮಕ್ಕಳ ಪ್ರಾಣಕ್ಕೆ ತೊಂದರೆಯಾದರೆ ಯಾರು ಹೊಣೆ’ ಎಂದು ಅಧ್ಯಕ್ಷ ಚಿದಂಬರ್ ಆಕ್ರೋಶ ವ್ಯಕ್ತಪಡಿಸಿದರು.

ಇ.ಇ ಭೇಟಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಇ.ಇ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿದರು. ಅವರ ಮಾತಿಗೆ
ಬಗ್ಗದ ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನೆ ಮುಂದುವರಿಸಿದರು. ‘ಇನ್ನೂ 10 ದಿನಗಳಲ್ಲಿ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗುವುದು’ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.