ADVERTISEMENT

ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರ ಸಂಘದ ಪಾತ್ರ ಮುಖ್ಯ: ಆರಗ ಜ್ಞಾನೇಂದ್ರ ಹೇಳಿಕೆ

ಪುಸ್ತಕ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 4:48 IST
Last Updated 3 ಅಕ್ಟೋಬರ್ 2021, 4:48 IST
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಜಿ.ಟಿ. ದೇವೇಗೌಡ, ವಿಧಾನಪರಿಷತ್ ಸದಸ್ಯ ರುದ್ರೇಗೌಡ್ರು ಇದ್ದರು.
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಜಿ.ಟಿ. ದೇವೇಗೌಡ, ವಿಧಾನಪರಿಷತ್ ಸದಸ್ಯ ರುದ್ರೇಗೌಡ್ರು ಇದ್ದರು.   

ಶಿಕಾರಿಪುರ:ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಲು ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ ಹಾಗೂ ಬಸವೇಶ್ವರ ಸಹಕಾರಿ ಒಕ್ಕೂಟ ಆಶ್ರಯದಲ್ಲಿ ನಡೆದ ‘ಸಹಕಾರಿ ಚೇತನ’, ‘ಮರೆಯಲಾಗದ ಮಹನೀಯರು’ ಹಾಗೂ ‘ಶಿಕಾರಿಪುರ ಅಭಿವೃದ್ಧಿ ಚಿಂತಕರು’ ಎಂಬ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯನ್ನು ಇಂದು ದೇಶ ಸ್ಮರಣೆ ಮಾಡುತ್ತಿದೆ.ಗ್ರಾಮೀಣ ಭಾರತ ಸಮೃದ್ಧಿಯಾದರೆ ಭಾರತ ರಾಮ ರಾಜ್ಯವಾಗುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಆದರೆ, ಸ್ವಾತಂತ್ರ್ಯ ನಂತರ ಗ್ರಾಮೀಣ ಭಾರತ ಸೊರಗುತ್ತಿದೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಭೂಕಾಂತ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಸಂಸದ ಬಿ.ವೈ. ರಾಘವೇಂದ್ರ, ‘ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಭೂಕಾಂತ್ ಅವರು ಹಲವು ಚುನಾಯಿತ ಪ್ರತಿನಿಧಿಗಳ ನೆನಪಿಸುವ ಕಾರ್ಯವನ್ನು ತಮ್ಮ ಪುಸ್ತಕದ ಮೂಲಕ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಶಾಸಕ ಹಾಗೂ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಜಿ.ಟಿ. ದೇವೇಗೌಡ, ‘ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಪುಸ್ತಕ ಬಿಡುಗಡೆ ಮಾಡುತ್ತಿರುವುದು ಉತ್ತಮ ಕಾರ್ಯ. ಯಡಿಯೂರಪ್ಪ ಸಹಕಾರ ಕ್ಷೇತ್ರದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಮುಖ್ಯಮಂತ್ರಿಯಾಗಿದ್ದಾರೆ. ರೈತ ಪರ ಹೋರಾಟಗಾರ ಹಾಗೂ ರಾಜ್ಯದ ಅಭಿವೃದ್ಧಿ ಹರಿಕಾರರಾಗಿದ್ದಾರೆ ಅವರನ್ನು ಬೆಂಬಲಿಸಿದ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರದಿಂದ ಸರ್ವರ ಅಭಿವೃದ್ಧಿಯಾಗುತ್ತದೆ’ಎಂದು ಶ್ಲಾಘಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಭೂಕಾಂತ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ್ರು, ಆಯನೂರು ಮಂಜುನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಡಿಸಿಸಿ ಬ್ಯಾಕ್ ನಿರ್ದೇಶಕ ಅಗಡಿ ಅಶೋಕ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರಾದ ರಾಮರೆಡ್ಡಿ, ಲೋಕಪ್ಪಗೌಡ್ರು, ಪರಿಸರ ಪ್ರವಾಸೋದ್ಯಮ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ಸಂಪಾದಕರು ಜಾನಪದ ಕಲಾವಿದರ ಸಂಘ ಶಿಕ್ಷಕರು ನಾಗರಾಜ್, ಪುಸ್ತಕ ಪ್ರಕಾಶಕ ಗಣೇಶ್ ಇದ್ದರು.

‘ಡಿಸಿಸಿ ಬ್ಯಾಂಕ್ ಉತ್ತಮ ಹಳಿಗೆ’
‘ಡಿಸಿಸಿ ಬ್ಯಾಂಕ್ ಉತ್ತಮ ಹಳಿಗೆ ತರಲು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದ ಬಿ.ಡಿ. ಭೂಕಾಂತ್ ಹಾಗೂ ಅಗಡಿ ಅಶೋಕ್ ಶ್ರಮ ಹಾಕಿದ್ದಾರೆ. ಡಿಸಿಸಿ ಬ್ಯಾಂಕನ್ನು ಒಬ್ಬ ಮನುಷ್ಯ 25 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಸುಪರ್ದಿಯಲ್ಲಿ ಹಿಡಿದುಕೊಂಡಿದ್ದ. ಕಬ್ಬಿಣ ಅಡವಿಟ್ಟು ಚಿನ್ನ ಮಾಡಿ ಸಾಲ ತೆಗೆದ ಪ್ರಕರಣ ನಡೆದಿತ್ತು. ಅವರನ್ನು ಹೊರಹಾಕುವಲ್ಲಿ ಬಿ.ಡಿ. ಭೂಕಾಂತ್ ಶ್ರಮ ಹಾಕಿದ್ದಾರೆ. ಡಿಸಿಸಿ ರೈತರ ಬ್ಯಾಂಕ್‌. ಅದು ಹಾಳಾದರೆ ನಾವು ಹಾಳಾಗುತ್ತೇವೆ ಎಂಬ ಆತಂಕ ನನಗೆ ಆ ಸಂದರ್ಭದಲ್ಲಿ ಇತ್ತು. ಆದರೆ, ಇಂದು ಡಿಸಿಸಿ ಬ್ಯಾಂಕ್ ಲಾಭದ ಹಾದಿಯಲ್ಲಿರುವುದು ಸಂತಸ ತಂದಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.