ADVERTISEMENT

ಸಾರ್ವಜನಿಕ ಸಂಸ್ಥೆ ಮಾರಾಟ ಆಘಾತಕಾರಿ: ಆರ್.ಎಂ. ಮಂಜುನಾಥ ಗೌಡ

ಮಹಾತ್ಮ– ಹುತಾತ್ಮರ ನೆನಪಿನ ನಡಿಗೆ ಬಹಿರಂಗ ಸಭೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:16 IST
Last Updated 29 ಜುಲೈ 2022, 4:16 IST
ತೀರ್ಥಹಳ್ಳಿ ತಾಲ್ಲೂಕಿನ ಕಡಿದಾಳಿನಲ್ಲಿರುವ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರು ಸಮಾಧಿಗೆ ತೀರ್ಥಹಳ್ಳಿಯ ಮಾಜಿ ಶಾಸಕ ಕಡಿದಾಳು ದಿವಾಕರ್‌ ಮಾಲಾರ್ಪಣೆ ಮಾಡಿದರು.
ತೀರ್ಥಹಳ್ಳಿ ತಾಲ್ಲೂಕಿನ ಕಡಿದಾಳಿನಲ್ಲಿರುವ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರು ಸಮಾಧಿಗೆ ತೀರ್ಥಹಳ್ಳಿಯ ಮಾಜಿ ಶಾಸಕ ಕಡಿದಾಳು ದಿವಾಕರ್‌ ಮಾಲಾರ್ಪಣೆ ಮಾಡಿದರು.   

ತೀರ್ಥಹಳ್ಳಿ: ‘ಬಟ್ಟೆ ಹಾಕಲು ಸಾಧ್ಯವಾಗದ ಕಾಲದಲ್ಲೂ ದೇಶಕ್ಕಾಗಿ ದುಡಿದ ಮಹನೀಯರ ಕೊಡುಗೆ ಅಪಾರ. ಕಾಂಗ್ರೆಸ್‌ ಮತ್ತು ನವಭಾರತದ ಇತಿಹಾಸ ಎರಡೂ ಒಂದೇ ಆಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ನೆಹರೂ ನಿರ್ಮಿಸಿರುವ ಸಾರ್ವಜನಿಕ ಸಂಸ್ಥೆ ಮಾರಾಟ ಮಾಡುವುದು ಆಘಾತಕಾರಿ’ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಗುರುವಾರ ಪಟ್ಟಣದಲ್ಲಿ ‘ಮಹಾತ್ಮ– ಹುತಾತ್ಮರ ನೆನಪಿನ ನಡಿಗೆ’ಯ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕನಿಷ್ಠ ಬಿಜೆಪಿ ಕಾರ್ಯಕರ್ತರ ಜೀವಕ್ಕೂ ರಕ್ಷಣೆ ಇಲ್ಲದಂತಾಗಿದೆ. ಸಮರ್ಥ ಆಡಳಿತ ನೀಡುವ ಗೃಹ ಸಚಿವರು ಎಡವಿದ್ದಾರೆ. ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿನೀಯ’ ಎಂದರು.

ಡಾಲರ್‌ ಮೌಲ್ಯ ಒಂದು ರೂಪಾಯಿಗೆ ಇಳಿಸುತ್ತೇವೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವಧಿಯಲ್ಲೇ ಡಾಲರ್‌ ₹80 ಮೌಲ್ಯ ತಲುಪಿದೆ. ಯುವ ಜನತೆ ಕೆಲಸ ಇಲ್ಲದೆ ಬೀದಿಗೆ ಬಂದಿದ್ದಾರೆ. ಭಾರತ ಸದ್ಯದಲ್ಲೇ ಮತ್ತೊಂದು ಶ್ರೀಲಂಕ ಆಗಲಿದೆ ಎಂದು ಭವಿಷ್ಯ ನುಡಿದರು.

ADVERTISEMENT

‘ದೇಶದ ಸರ್ವಾಧಿಕಾರಿ ಆಡಳಿತ ಕೊನೆಗೊಳ್ಳಬೇಕು. ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ಮೋದಿ, ಶಾ ಜೋಡಿ ಎಂದುಕೊಂಡಿರಬಹುದು. ದುಷ್ಟರು ಹಿಂದುತ್ವದ ಆಧಾರದ ಮೇಲೆ ಪಕ್ಷ ಕಟ್ಟಿದ್ದಾರೆ. ನಾವೆಲ್ಲ ಒಟ್ಟಾಗಿ ಮತ್ತೊಂದು ಸುತ್ತಿನ ಸ್ವಾತಂತ್ರ್ಯವನ್ನು ಸತ್ಯ, ಶಾಂತಿ, ಅಹಿಂಸೆಯಿಂದ ಪಡೆಯಬೇಕು’ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಕಡಿದಾಳು ದಿವಾಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಶಿಕಾರಿಪುರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಹಾಂತೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಎಲ್.ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ಬಿ.ಪಿ.ರಾಮಚಂದ್ರ, ಶ್ರುತಿ ವೆಂಕಟೇಶ್, ಯಲ್ಲಪ್ಪ, ಮುಖಂಡರಾದ ಕಡಿದಾಳು ತಾರಾನಾಥ, ಮಟ್ಟಿನಮನೆ ರಾಮಚಂದ್ರ, ಹಾಲಗದ್ದೆ ಉಮೇಶ್‌, ಸುಷ್ಮಾ ಸಂಜಯ್, ಸುಶೀಲ ಶೆಟ್ಟಿ, ಚೇತನಾ ಶ್ರೀಕಾಂತ್, ಜುಲ್ಫೀಕರ್ ಚಿಂತಕರಾದ ಕಲ್ಲಹಳ್ಳ ಶ್ರೀಧರ್, ಕೆ.ಎಲ್.ಅಶೋಕ್ ಇದ್ದರು.

***

18 ಕಿ.ಮೀ. ಪಾದಯಾತ್ರೆ
‘ಮಹಾತ್ಮ– ಹುತಾತ್ಮರ ನೆನಪಿನ ನಡಿಗೆ’ ಹಾರೋಗೊಳಿಗೆ ಗ್ರಾಮದ ಕಡಿದಾಳಿನಲ್ಲಿರುವ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಸಮಾಧಿ ಸ್ಥಳದಿಂದ ತೀರ್ಥಹಳ್ಳಿ ಪಟ್ಟಣದವರೆಗೆ ನಡೆಯಿತು. ಮಾಜಿ ಶಾಸಕ ಕಡಿದಾಳು ದಿವಾಕರ್‌ ಮಾಲೆ ಅರ್ಪಿಸಿ ಚಾಲನೆ ನೀಡಿದರು. ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಸುಮಾರು 18 ಕಿ.ಮೀ. ಪಾದಯಾತ್ರೆಯಲ್ಲಿ ಕಾಂಗ್ರೆಸ್‌ ಮುಖಂಡರು ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.