ADVERTISEMENT

ಹೆಗಲತ್ತಿ ಭೂ ಕುಸಿತಕ್ಕೆ ವರ್ಷ: ಗ್ರಾಮಸ್ಥರ ಆತಂಕ

ಶಿವಾನಂದ ಕರ್ಕಿ
Published 6 ಆಗಸ್ಟ್ 2020, 8:15 IST
Last Updated 6 ಆಗಸ್ಟ್ 2020, 8:15 IST
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಹೆಗಲತ್ತಿ ಗ್ರಾಮದ ಶ್ರೀ ಮಲೆಮಹದೇಶ್ವರ ದೇವರ ಗುಡ್ಡ ಜರಿದು ಕೃಷಿ ಭೂಮಿ ಹಾಳುಮಾಡಿರುವುದು (ಸಂಗ್ರಹ ಚಿತ್ರ).
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಹೆಗಲತ್ತಿ ಗ್ರಾಮದ ಶ್ರೀ ಮಲೆಮಹದೇಶ್ವರ ದೇವರ ಗುಡ್ಡ ಜರಿದು ಕೃಷಿ ಭೂಮಿ ಹಾಳುಮಾಡಿರುವುದು (ಸಂಗ್ರಹ ಚಿತ್ರ).   

ತೀರ್ಥಹಳ್ಳಿ: ತಾಲ್ಲೂಕಿನ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಹೆಗಲತ್ತಿ ಗ್ರಾಮದ ಜನರಿಗೆ ಮಳೆಗಾಲ ದುಃಸ್ವಪ್ನದಂತೆ ಕಾಡುತ್ತಿದೆ. ಕಳೆದ ವರ್ಷ ಭೂ ಕುಸಿತದ ನೆನಪು ಮಾಸಿಲ್ಲ. ಮಳೆ ಬಂತೆಂದರೆ ಗ್ರಾಮದ ಜನರು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಯಾವ ಕ್ಷಣದಲ್ಲಿ ಗುಡ್ಡ ಜರಿದು ಮೈ ಮೇಲೆ ಬೀಳುತ್ತದೆಯೋಎಂಬ ಚಿಂತೆ ಗ್ರಾಮಸ್ಥರನ್ನು ಆವರಿಸಿದೆ.

2019ರ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಗ್ರಾಮದ ಮಲೆ ಮಹದೇಶ್ವರ ದೇವರ ಗುಡ್ಡ ಜರಿದು ಕೃಷಿ ಜಮೀನಿನ ಮೇಲೆ ಹರಿದಿದ್ದರಿಂದ ಗ್ರಾಮದ ಜನರು ನೆಲೆ ಕಳೆದುಕೊಳ್ಳುವಂತಾಗಿತ್ತು.

ಭತ್ತದ ಗದ್ದೆಗಳು, ಅಡಿಕೆ ತೋಟ, ಮನೆಯಂಗಳದಲ್ಲಿನ ಕುಡಿಯುವ ನೀರಿನ ಬಾವಿ, ಪಂಪ್‌ಸೆಟ್, ಕೃಷಿ ಪರಿಕರಗಳು 2019ರ ಆಗಸ್ಟ್ 10ರಂದು ರಾತ್ರಿ ಜರಿದು ಬಿದ್ದ ಗುಡ್ಡದ ಮಣ್ಣಿನಲ್ಲಿ ಹಳ್ಳವಾಗಿ ಹರಿದು ಗ್ರಾಮದ ಜನರ ಬದುಕನ್ನು ಕಸಿದುಕೊಂಡಿತ್ತು.

ADVERTISEMENT

ಈ ವರ್ಷವೂ ಆಗಸ್ಟ್ ತಿಂಗಳಿನ ಮೊದಲ ವಾರವೇ ಅಬ್ಬರಿಸಿ ಸುರಿಯುತ್ತಿದೆ. ಮಳೆ ಹೆಗಲತ್ತಿ ಗ್ರಾಮ ಸೇರಿ ತಾಲ್ಲೂಕಿನ ಗುಡ್ಡದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡವರ ನಿದ್ದೆಗೆಡಿಸುವಂತೆ ಮಾಡಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ತವರು ಜಿಲ್ಲೆಯಲ್ಲಾದ ಪ್ರಕೃತಿ ವಿಕೋಪದ ಅನಾಹುತವನ್ನು ಖುದ್ದಾಗಿ ವೀಕ್ಷಿಸಿ ವಿಶೇಷ ಪ್ಯಾಕೇಜಿನ ಭರವಸೆ ನೀಡಿದ್ದರು. ನಿಯಮದಂತೆ ಪರಿಹಾರ ನೀಡಲಾಗಿದ್ದರೂ ಹೆಚ್ಚಿನ ಪರಿಹಾರ ಜನರಿಗೆ ಸಿಕ್ಕಿಲ್ಲ. ನೆಲೆ ಕಳೆದುಕೊಂಡ ಕುಟುಂಬಗಳ ಬದುಕು ಈಗ ಅತಂತ್ರವಾಗಿದ್ದು, ಕುಡಿಯುವ ನೀರಿಗೂ ಗ್ರಾಮದ ಜನರು ಪರದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಶಿವಮೊಗ್ಗ-ತೀರ್ಥಹಳ್ಳಿ ಗಡಿಭಾಗದ ಮಂಡಗದ್ದೆ ಹೋಬಳಿಯ ಹೆಗಲತ್ತಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕೃಷಿ ಬದುಕು ಕಟ್ಟಿಕೊಂಡ 25ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಗುಡ್ಡ ಕುಸಿದು ಗ್ರಾಮದ ಜನರ ಬದುಕನ್ನು ಕಿತ್ತುಕೊಂಡಿತ್ತು.ಸಂತ್ರಸ್ತ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ನೆರವಿನಡಿಯಲ್ಲಿ ಒಂದೊಂದು ಕುಟುಂಬಕ್ಕೆ ₹ 35 ಸಾವಿರ ಪರಿಹಾರ ನೀಡಿ ಸರ್ಕಾರ ಕೈತೊಳೆದುಕೊಂಡಿದೆ ಎಂದು ಕೆರೆಹಳ್ಳಿ ದೇವರಾಜ್ ದೂರುತ್ತಾರೆ.

‘ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಹೆಗಲತ್ತಿ ಸೇರಿ ಅಲಸೆ, ಹೆಬ್ಬಳ್ಳಿ, ಶೆಟ್ಟಿಹಳ್ಳಿ, ಕೆರೆಹಳ್ಳಿ, ಶಂಕರಗುಡ್ಡ ಜರಿದ ಪ್ರದೇಶಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಜನರಿಗೆ ಮಾಹಿತಿ ನೀಡಿಲ್ಲ. ಗುಡ್ಡ ಜರಿಯಲು ಇರುವ ಕಾರಣವೇನು ಎಂಬುದನ್ನು ಸ್ಥಳೀಯರಿಗೆ ತಿಳಿಸಿಲ್ಲ. ಜನರಿಗಿರುವ ಆತಂಕವನ್ನು ದೂರ ಮಾಡಿಲ್ಲ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.