ADVERTISEMENT

ಚಿಟ್ಟೇಬೈಲಿನತ್ತ ಪ್ರಾಜ್ಞರ, ಸಂಶೋಧಕರ ಚಿತ್ತ

ಕೇಂದ್ರ ಸರ್ಕಾರ ರೂಪಿಸಿರುವ ‘ಉನ್ನತ ಭಾರತ’ ಯೋಜನೆಯಡಿ ಸಂಸ್ಕೃತ ಭಾಷೆ ಪುನಶ್ಚೇತನ

ಶಿವಾನಂದ ಕರ್ಕಿ
Published 13 ಆಗಸ್ಟ್ 2019, 20:15 IST
Last Updated 13 ಆಗಸ್ಟ್ 2019, 20:15 IST
ತೀರ್ಥಹಳ್ಳಿ ತಾಲ್ಲೂಕು ಚಿಟ್ಟೇಬೈಲು ಪ್ರಜ್ಞಾಭಾರತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂಶೋಧಕರ ಸಂವಾದ
ತೀರ್ಥಹಳ್ಳಿ ತಾಲ್ಲೂಕು ಚಿಟ್ಟೇಬೈಲು ಪ್ರಜ್ಞಾಭಾರತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂಶೋಧಕರ ಸಂವಾದ   

ತೀರ್ಥಹಳ್ಳಿ: ಸಂಸ್ಕೃತ ಭಾಷೆ ಸೇರಿ ಗ್ರಾಮದ ಸರ್ವೋದಯಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ‘ಉನ್ನತ ಭಾರತ’ ಯೋಜನೆಗೆ ಆಯ್ಕೆಯಾಗಿರುವ ಚಿಟ್ಟೇಬೈಲು ಗ್ರಾಮಕ್ಕೆ ಈಗ ಪ್ರಾಜ್ಞರ, ಸಂಶೋಧಕರ ದಂಡು ಭೇಟಿ ನೀಡುತ್ತಿದೆ.

ಸಂಸ್ಕೃತ ಅಭಿವೃದ್ಧಿ ಜತೆಗೆ ಗಾಂಧೀಜಿ ಕನಸಿನ ‘ಗ್ರಾಮ ಸ್ವರಾಜ್ಯ’ದ ಕಲ್ಪನೆಯಲ್ಲಿ ಚಿಟ್ಟೇಬೈಲಿನ ಗ್ರಾಮವನ್ನು ಮಾದರಿಯನ್ನಾಗಿಸಲು ದೇಶದ ಐದು ಗ್ರಾಮಗಳಲ್ಲಿ ಒಂದಾಗಿ ಆಯ್ಕೆ ಮಾಡಿರುವುದು ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಕಲೆ, ಸಾಹಿತ್ಯ, ಸಂಸ್ಕೃತಿಯ ತವರು ತೀರ್ಥಹಳ್ಳಿ. ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಸಲ್ಲಿಸಿದ ಕೋರಿಕೆಯ ಮೇರೆಗೆ ಚಿಟ್ಟೇಬೈಲು ಗ್ರಾಮಈ ಯೋಜನೆಗೆ ಆಯ್ಕೆಗೊಂಡಿದೆ.

ADVERTISEMENT

ಇದು ಗ್ರಾಮದಲ್ಲಿನ ಸಂಸ್ಕೃತ ಭಾಷೆಯ ಹಳೆ ಬೇರು ಹೊಸ ಚಿಗುರನ್ನು ತರಲಿದೆ ಎಂಬ ಭರವಸೆ ಮೂಡಿಸಿದೆ.

(ತೀರ್ಥಹಳ್ಳಿ ತಾಲ್ಲೂಕಿನ ಚಿಟ್ಟೇಬೈಲು ಗ್ರಾಮದ ‘ಉನ್ನತ ಭಾರತ’ ಯೋಜನೆವೃದ್ಧಿ ಕಟ್ಟಡದ ನೀಲನಕ್ಷೆ)

‘ಉನ್ನತ ಭಾರತ’ ಯೋಜನೆ ಅಡಿಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅನುದಾನ ಲಭ್ಯವಾಗಲಿದೆ. ಸಂಸ್ಕೃತ ಅಧ್ಯಯನ ಕೇಂದ್ರ, ಸಂಶೋಧನೆ, ಸಂಸ್ಕೃತವನ್ನು ಆಡುಭಾಷೆಯನ್ನಾಗಿಸಲು ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ.

ಗ್ರಾಮದಲ್ಲಿ ಆರಂಭ ಗೊಂಡ ಪ್ರಜ್ಞಾಭಾರತಿ ಪ್ರೌಢಶಾಲೆಯಲ್ಲಿ ಸಂಸ್ಕೃತವನ್ನು ಆಡುಭಾಷೆಯನ್ನಾಗಿ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಲಾಗಿದೆ. ಸ್ಥಳೀಯ ಜನ, ಆಸಕ್ತರಿಗೆ ಸಂಸ್ಕೃತ ಭಾಷೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ವರ್ಷ ಶೃಂಗೇರಿ ರಾಷ್ಟ್ರೀಯ ಸಂಸ್ಥಾನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಜ್ಞಾಭಾರತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜ ಅಡಿಗ ಅವರನ್ನು ಸನ್ಮಾನಿಸಲಾಗಿತ್ತು. ಆ ಸಂದರ್ಭದಲ್ಲಿ ಅಡಿಗ ಅವರು ಚಿಟ್ಟೇಬೈಲು ಗ್ರಾಮವನ್ನು ಸಂಸ್ಕೃತ ಗ್ರಾಮವನ್ನಾಗಿ ಆಯ್ಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಕೋರಿದ್ದರು.

ಮಧ್ಯಮ ವರ್ಗದವರು ಹೆಚ್ಚಿರುವ ಚಿಟ್ಟೇಬೈಲು ಗ್ರಾಮದಲ್ಲಿ 62 ಕುಟುಂಬಗಳಿವೆ. ಕ್ರಿಶ್ಚಿಯನ್ನರು, ಒಕ್ಕಲಿಗರು, ಬ್ರಾಹ್ಮಣ ಸಮುದಾಯದ ಕುಟುಂಬಗಳು ಹೆಚ್ಚಿರುವ ಗ್ರಾಮದಲ್ಲಿ ಸಂಸ್ಕೃತ ಭಾಷೆಯ ಶಿಬಿರಗಳು ಹಿಂದೆ ನಡೆಯುತ್ತಿದ್ದವು ಎಂಬ ಇತಿಹಾಸವಿದೆ. ಈಗ ಚಿಟ್ಟೇಬೈಲಿನಲ್ಲಿ ಸಂಸ್ಕೃತ ಭಾಷೆ ಅಭಿವೃದ್ಧಿಗೆ ಪೂರಕ ವೇದಿಕೆ ಕಲ್ಪಿಸಿರುವುದು ಎಲ್ಲರ ಚಿತ್ತ ಚಿಟ್ಟೇಬೈಲುನತ್ತ ಹೊರಳುವಂತೆ ಮಾಡಿದೆ.

ಸಂಸ್ಕೃತ ಭಾಷೆಯ ಜತೆಗೆ ವಿಚಾರ ಸಂಕಿರಣ, ಸ್ವಚ್ಛತಾ ಅಭಿಯಾನ, ಯೋಗ ತರಬೇತಿ, ಕೌಶಲಾಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಕ್ಕೆ ಅವಕಾಶ ಮಾಡಲಾಗಿದೆ.

ರಾಷ್ಟ್ರದ ಮೊದಲ ಸಂಸ್ಕೃತ ಗ್ರಾಮವೆಂದು ಗುರುತಾಗಿರುವ ಮತ್ತೂರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಈಗ ಚಿಟ್ಟೇಬೈಲು ಗ್ರಾಮವೂ ಅದೇ ಸಾಲಿಗೆ ಸೇರುವಂತಾಗಿದೆ. ಗ್ರಾಮವನ್ನು ಸಂಸ್ಕೃತ ಭಾಷೆಯ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೂಲಸೌಕರ್ಯವನ್ನು ಕಲ್ಪಿಸುವ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ.

‘ಸಂಸ್ಕೃತ ಭಾಷೆಯ ಜತೆಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆ ಸಹಕಾರಿಯಾಗಲಿದೆ. ಮಕ್ಕಳಿಗೆ ಸಂಸ್ಕೃತ ಭಾಷೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಅನೇಕ ವಿದ್ವಾಂಸರು, ಸಂಶೋಧಕರು ಗ್ರಾಮಕ್ಕೆ ಭೇಟಿ ನೀಡಿ ಚರ್ಚಿಸತೊಡಗಿದ್ದಾರೆ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಸರ್ವೆ ಕಾರ್ಯಕ್ಕೆ ಬರುವುದಾಗಿ ತಿಳಿಸಿದ್ದಾರೆ’ ಎನ್ನುತ್ತಾರೆ ಪ್ರಜ್ಞಾಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಅಡಿಗ.

'ಹಿಂದಿನವರನ್ನು ಬಿಟ್ಟರೆ ಈಗಿನವರಿಗೆ ಸಂಸ್ಕೃತ ಪರಿಚಯವಿಲ್ಲ. ಭಾಷೆಯ ಉಳಿವಿಗೆ ಕೇಂದ್ರ ಸರ್ಕಾರ ಒಳ್ಳೆಯ ತೀರ್ಮಾನ ತೆಗೆದು
ಕೊಂಡಿದೆ. ಈ ಯೋಜನೆ ಗ್ರಾಮವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ’ ಎನ್ನುತ್ತಾರೆ ಗ್ರಾಮಸ್ಥ ಶ್ರೀನಾಥ್ ಕೊಪ್ಪಲು.

*ಸಂಸ್ಕೃತ ಭಾಷೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ರಾಷ್ಟ್ರದ 5 ಕೇಂದ್ರಗಳಲ್ಲಿ ಚಿಟ್ಟೇಬೈಲು ಗ್ರಾಮವನ್ನು ಆಯ್ಕೆಮಾಡಿರುವುದು ಸಂಶೋಧಕರಿಗೆ ಪೂರಕವಾಗಲಿದೆ.

– ಡಾ.ಸಂತೋಷ್ ಕುಮಾರ್ ಹಾನಗಲ್, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.