ತೀರ್ಥಹಳ್ಳಿ: 5,392 ಷೇರುದಾರ ರೈತರನ್ನು ಹೊಂದಿರುವ ಭೂ ಬ್ಯಾಂಕ್ ಒಟ್ಟು ₹46.28 ಕೋಟಿ ವಹಿವಾಟು ನಡೆಸಿ ₹54.73 ಲಕ್ಷ ಲಾಭಗಳಿಸಿದೆ ಎಂದು ಭೂ ಬ್ಯಾಂಕ್ ಅಧ್ಯಕ್ಷ ಬಸವಾನಿ ವಿಜಯದೇವ್ ತಿಳಿಸಿದರು.
ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶೇ 84.57ರಷ್ಟು ಸಾಲ ಮರುಪಾವತಿ ಹೊಂದಿದ್ದು, ಸುತ್ತಿದಾರರ ವಿರುದ್ಧ ದಾವೆ ದಾಖಲಿಸುತ್ತಿದ್ದೇವೆ. ರೈತರು ಬ್ಯಾಂಕ್ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಸರ್ಕಾರ, ನಬಾರ್ಡ್‌ನಿಂದ ಯಾವುದೇ ವಿಶೇಷ ಆರ್ಥಿಕ ನೆರವು ಸಿಗುತ್ತಿಲ್ಲ. ಆದರೂ 9 ವರ್ಷದಿಂದ ಆಡಿಟ್ ವರದಿಯಲ್ಲಿ ‘ಎ’ ಗ್ರೇಡ್ ಮಾನ್ಯತೆ ಪಡೆಯುತ್ತಿದೆ. ರೈತ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲು ತೀರ್ಮಾನಿಸಿದ್ದೇವೆ ಎಂದರು.
ಹೊಸತೋಟ ನಿರ್ಮಾಣ, ಹಳೆ ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ, ಕೊಟ್ಟಿಗೆ ನಿರ್ಮಾಣ ಸೇರಿದಂತೆ ಅನೇಕ ಉದ್ದೇಶಕ್ಕೆ ಭೂ ಬ್ಯಾಂಕ್ ರೈತರಿಗೆ ವಿಶೇಷ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದೆ. 85 ವರ್ಷದ ಹಿಂದೆ ಆರಂಭಿಸಿದ ಭೂ ಬ್ಯಾಂಕ್ ರೈತ ಸಮುದಾಯಕ್ಕೆ ಆರ್ಥಿಕವಾಗಿ ಬೆಳೆಯಲು ವಿಶೇಷ ರೀತಿಯಲ್ಲಿ ಸಹಕರಿಸಿದೆ ಎಂದು ಹೇಳಿದರು.
ರೈತರಿಗೆ ಸಾಲ ವಿತರಣೆ ಮಾಡುವುದರ ಮೂಲಕ ಬ್ಯಾಂಕ್ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಿಲ್ಲ. ಮುಂದಿನ ವರ್ಷಗಳಲ್ಲಿ ಚೀಟಿನಿಧಿ, ಅಡುಗೆ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ. ಆಡಳಿತ ಮಂಡಳಿ ಈಗಾಗಲೇ ಇದಕ್ಕೆ ಒಪ್ಪಿಗೆ ನೀಡಿದ್ದು ಸರ್ವ ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತದೆ. ಸಭೆ ಒಪ್ಪಿಗೆ ನೀಡಿದರೆ ಸರಕಾರಕ್ಕೆ ಪತ್ರ ಸಲ್ಲಿಸಿ ಅನುಮತಿ ಕೋರಲಾಗುತ್ತದೆ ಎಂದು ತಿಳಿಸಿದರು.
ಭೂ ಬ್ಯಾಂಕ್ ಉಪಾಧ್ಯಕ್ಷ ಇರೇಗೋಡು ಶ್ರೀಧರಮೂರ್ತಿ, ಕಾರ್ಯದರ್ಶಿ ಸಂಜಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.