ಶಿವಮೊಗ್ಗ: ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ಸಿಂಹಗಳ ನಂತರ ಈಗ ಹುಲಿಗಳ ತಂಡವನ್ನು ಸ್ವಾಗತಿಸಲು ಇಲ್ಲಿನ ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮದ ಆಡಳಿತ ಸಿದ್ಧತೆ ನಡೆಸಿದೆ.
ಸಂತಾನಾಭಿವೃದ್ಧಿಯ ಉದ್ದೇಶದಿಂದ ಒಂದು ಗಂಡು ಹಾಗೂ ಎರಡು ಹೆಣ್ಣು ಹುಲಿಗಳನ್ನು ಮಹಾರಾಷ್ಟ್ರದ ಔರಂಗಬಾದ್ ಮೃಗಾಲಯದಿಂದ ಶಿವಮೊಗ್ಗಕ್ಕೆ ತರಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
‘ಔರಂಗಾಬಾದ್ ನಿಂದ ಹುಲಿಗಳ ತರಲು ನಮಗೆ ಅನುಮತಿ ದೊರೆತಿದೆ. ಹುಲಿಗಳ ಬದಲಿಗೆ ಇಲ್ಲಿಂದ ಆಸ್ಟ್ರಿಚ್ ಪಕ್ಷಿಗಳ ಕಳುಹಿಸಲಾಗುವುದು. ಜುಲೈ ಅಂತ್ಯಕ್ಕೆ ಹುಲಿಗಳನ್ನು ತರಲು ಯೋಜಿಸಲಾಗಿದೆ’ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಅಮರಾಕ್ಷರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹಾಲಿ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿರುವ ಹುಲಿಗಳ ಪೈಕಿ 18 ವರ್ಷದ ಸೀತಾ, 16 ವರ್ಷದ ದಶಮಿ ಎಂಬ ಎರಡು ಹೆಣ್ಣು ಹುಲಿಗಳಿದ್ದು, ವೃದ್ಧಾಪ್ಯದ ಹಂತದಲ್ಲಿವೆ. ಸಂತಾನಾಭಿವೃದ್ಧಿಯ ಶಕ್ತಿ ಕಳೆದುಕೊಂಡಿವೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೆರೆ ಹಿಡಿದ ಎರಡು ಗಂಡು ಹುಲಿಗಳು ಮೃಗಾಲಯದಲ್ಲಿವೆ. ಆದರೆ ಆ ಹುಲಿಗಳನ್ನು ಸಫಾರಿಯಲ್ಲಿ ಬಿಡುವಂತಿಲ್ಲ.
ಔರಂಗಬಾದ್ ನಿಂದ ಹುಲಿಗಳ ತಂದರೆ ಒಟ್ಟು ಏಳು ಹುಲಿಗಳು ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಯಲ್ಲಿ ಕಾಣಸಿಗಲಿವೆ. ಈಗ ತರುತ್ತಿರುವ ಹುಲಿಗಳಿಗೆ ಎರಡರಿಂದ ನಾಲ್ಕು ವರ್ಷಗಳ ಹರೆಯ. ಹೀಗಾಗಿ ಸಂತಾನೋತ್ಪತ್ತಿಗೆ ನೆರವಾಗಲಿದೆ ಎಂದು ಮೃಗಾಲಯದ ಮೂಲಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.