ADVERTISEMENT

‘ಅರಣ್ಯಶಾಸ್ತ್ರ ಪದವೀಧರರನ್ನೇ ನೇಮಿಸಿ’

ಇರುವಕ್ಕಿ ಕೃಷಿ ವಿವಿಯ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:46 IST
Last Updated 14 ಅಕ್ಟೋಬರ್ 2025, 2:46 IST
ತ್ಯಾಗರ್ತಿ ಸಮೀಪದ ಇರುವಕ್ಕಿಯ ಕೃಷಿ ವಿವಿಯ ಎದುರು ಬಿ.ಎಸ್ಸಿ ಅರಣ್ಯಶಾಸ್ತ್ರ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ತ್ಯಾಗರ್ತಿ ಸಮೀಪದ ಇರುವಕ್ಕಿಯ ಕೃಷಿ ವಿವಿಯ ಎದುರು ಬಿ.ಎಸ್ಸಿ ಅರಣ್ಯಶಾಸ್ತ್ರ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ತ್ಯಾಗರ್ತಿ: ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ಅರಣ್ಯಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ಬಿ.ಎಸ್ಸಿ ಪದವೀಧರರನ್ನೇ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಎದುರು ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ಸದಸ್ಯರು ಪ್ರತಿಭಟನೆ ನೆಡೆಸಿದರು.

ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿ.ಇ.ಟಿಯಲ್ಲಿ ಹೆಚ್ಚಿನ ಅಂಕಗಳಿಸಿ ಅರಣ್ಯಶಾಸ್ತ್ರ ಆಯ್ಕೆ ಮಾಡಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಬಿ.ಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನೇ ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುತ್ತಿರುವುದು ಈ ವ್ಯಾಸಂಗದ ಮಹತ್ವವನ್ನು ಸೂಚಿಸುತ್ತದೆ ಎಂದರು. 

ಅರಣ್ಯಶಾಸ್ತ್ರವು ಒಂದು ವಿಶೇಷ ಕ್ಷೇತ್ರವಾಗಿದ್ದು, ಅರಣ್ಯ ಪರಿಸರಶಾಸ್ತ್ರ, ಜೀವವೈವಿಧ್ಯ ಸಂರಕ್ಷಣೆ, ವೃಕ್ಷಶಾಸ್ತ್ರ ವಿಧಾನಗಳು, ವನ್ಯಜೀವಿ ನಿರ್ವಹಣೆ, ಹವಾಮಾನ ಬದಲಾವಣೆ ತಡೆಗೆ ಅರಣ್ಯ ನಿರ್ವಹಣೆ, ಅರಣ್ಯಸಂಪತ್ತು ಬಳಕೆ ಹಾಗೂ ಸಾಮಾಜಿಕ ಅರಣ್ಯ ನಿರ್ವಹಣೆಗೆ ನಿರ್ದಿಷ್ಟ ಅರಣ್ಯ ಶಿಕ್ಷಣ ಮತ್ತು ತರಬೇತಿ ಹೊಂದಿರುವ ಅಭ್ಯರ್ಥಿಗಳೇ ಅಗತ್ಯ. ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ ಮೊದಲು ನೀಡಿದ್ದ ಶೇ 75ರಷ್ಟು ಮೀಸಲಾತಿಯನ್ನು ಶೇ 50ಕ್ಕೆ ಕಡಿತಗೊಳಿಸಿರುವುದು ಸರಿಯಲ್ಲ. ಇದರಿಂದ ಅರಣ್ಯ ನಿರ್ವಹಣೆಗೆ ಬೇಕಾದ ತಾಂತ್ರಿಕ ಪರಿಣತಿ ಕ್ಷೀಣಗೊಳ್ಳಲಿದೆ ಎಂದು ಆರೋಪಿಸಿದರು.

ADVERTISEMENT

ಅರಣ್ಯ ಪದವೀಧರರ ಅಗತ್ಯವನ್ನು ಗುರುತಿಸಿ ತಮಿಳುನಾಡು, ತೆಲಂಗಾಣ, ಕೇರಳ, ಒಡಿಶಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್‌ನಂತಹ ರಾಜ್ಯಗಳು ಮೀಸಲಾತಿ ಒದಗಿಸಿವೆ. ಅರಣ್ಯ ಪದವೀಧರ ವಿದ್ಯಾರ್ಥಿಗಳ ವೃತ್ತಿ ಜೀವನ ಮತ್ತು ಭವಿಷ್ಯದ ದೃಷ್ಟಿಯಿಂದ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಗೆ ಬಿ.ಎಸ್ಸಿ ಅರಣ್ಯಶಾಸ್ತ್ರವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ನಿಗದಿ ಮಾಡಿ ಪದವೀಧರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕೃಷಿ ವಿವಿ ಕುಲಪತಿಗೆ ಮನವಿ ಸಲ್ಲಿಸಲಾಯಿತು. ಬಿಎಸ್ಸಿ ಅರಣ್ಯಶಾಸ್ತ್ರ ವಿದ್ಯಾರ್ಥಿಗಳಾದ ವೆಂಕಟೇಶ್, ಮೋನಿಕಾ, ಮಾರುತಿ, ಶರತ್, ಅನುಪ್, ಯಶವಂತ, ಅಮೃತ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.