ADVERTISEMENT

ಟಿಪ್ಪು ಅಧ್ಯಾಯ ಕೈಬಿಡುವ ನಿರ್ಧಾರಕ್ಕೆ ಕೆಬಿಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:17 IST
Last Updated 28 ಜುಲೈ 2020, 14:17 IST

ಶಿವಮೊಗ್ಗ: ಏಳನೇ ತರಗತಿ ಪಠ್ಯದಿಂದ ಟಿಪ್ಪುಸುಲ್ತಾನ್ ಅಧ್ಯಯವನ್ನು ಕೈಬಿಡುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಲೇ ವೀರ ಮರಣಹೊಂದಿದವರು. ಅವರ ಚರಿತ್ರೆ ಬಿಜೆಪಿ ಮುಖಂಡರಿಗೆ ಇಷ್ಟವಾಗದಿದ್ದರೆ ಅವರು ಓದುವುದು ಬೇಡ. ಟಿಪ್ಪು ಧರ್ಮಾಂಧ ಅಥವಾ ಜಾತ್ಯತೀತ ರಾಜ ಎನ್ನುವ ಕುರಿತು ಮಕ್ಕಳ ಬಳಿ ಚರ್ಚಿಸುವುದು ಅನಗತ್ಯ. ಪಠ್ಯದ ಮೂಲಕ ಅವರನ್ನು ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿ ಮನವರಿಕೆ ಮಾಡಿಕೊಡುವುದು ಶಿಕ್ಷಣದ ಒಂದು ಭಾಗ.

ಯಾರೋ ಒಬ್ಬ ರಾಜ ಇಷ್ಟವಿಲ್ಲ ಎಂದ ತಕ್ಷಣ ಇತಿಹಾಸ ಅಳಿಸಲು ಸಾಧ್ಯವಿಲ್ಲ. ಹೈದರಾಲಿ, ಟಿಪ್ಪು ಆಡಳಿತ ಕಾಲಘಟ್ಟ. ಟಿಪ್ಪುವಿನ ಇತಿಹಾಸ. ಮೂರನೇ ಮತ್ತು ನಾಲ್ಕನೇ ಆಂಗ್ಲೊ–ಮೈಸೂರು ಕದನ, ಬ್ರಿಟಿಷರ ವಿರುದ್ಧದ ಹೋರಾಟ, ರಾಕೆಟ್‌ ತಂತ್ರಜ್ಞಾನದ ಪರಿಚಯ. 1799ರಲ್ಲಿ ಅವರು ಹೊಂದಿದ ವೀರ ಮರಣ. ನಂಜನಗೂಡು ದೇವಸ್ಥಾನ, ಶೃಂಗೇರಿ ಸೇರಿದಂತೆ ಹಿಂದೂಗಳ ದೇವಸ್ಥಾನ, ಮಠಗಳಿಗೆ ಅವರು ನೀಡಿದ ನೆರವು ಮರೆ ಮಾಚಲು ಸಾಧ್ಯವೇ ಎಂದು ಪ್ರಸನ್ನಕುಮಾರ್ ಪ್ರಶ್ನಿಸಿದ್ದಾರೆ.
ರಾವಣ ಕೆಟ್ಟವನು ಎನ್ನುವ ಕಾರಣಕ್ಕೆ ರಾಮಾಯಣದ ಭಾಗದಿಂದ ರಾವಣನ ಪಾತ್ರವನ್ನು, ದುರ್ಯೋಧನ, ದುಶ್ಯಾಸನರು ದುಷ್ಟರು ಎನ್ನುವ ಕಾರಣಕ್ಕೆ ಅವರ ಪಾತ್ರಗಳನ್ನು ಅಳಿಸಿಹಾಕಿ ರಾಮಾಯಣ, ಮಹಾಭಾರತ ಕಥೆ ಓದಿಸಲು ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಮಕ್ಕಳ ಮನಸ್ಸಿನಲ್ಲಿ ಧರ್ಮಾಂಧತೆ ತುಂಬದೇ, ಪಠ್ಯವನ್ನು ಕೇಸರೀಕರಣಗೊಳಿಸದೇ ಇತಿಹಾಸವನ್ನು ಇತಿಹಾಸವಾಗಿ ಮಕ್ಕಳು ನೋಡಲು ಬಿಡಬೇಕು. ಇಂತಹ ಸಣ್ಣತನದ ಮೂಲಕ ಯಾರೂ ಚರಿತ್ರೆ ಅಳಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿರುವ ಅವರು, ತಕ್ಷಣ ಇಂತಹ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.