ADVERTISEMENT

ಶಿವಮೊಗ್ಗ | ಸಂಚಾರ ನಿಯಮ ಉಲ್ಲಂಘನೆ: ಶೇ 50ರಷ್ಟು ರಿಯಾಯಿತಿ, ದಂಡ ಕಟ್ಟಲು ಪೈಪೋಟಿ

ವೆಂಕಟೇಶ ಜಿ.ಎಚ್.
Published 1 ಸೆಪ್ಟೆಂಬರ್ 2025, 5:40 IST
Last Updated 1 ಸೆಪ್ಟೆಂಬರ್ 2025, 5:40 IST
ಶಿವಮೊಗ್ಗದ ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ಸಂಚಾರ ವಿಭಾಗದ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡದ ಮೊತ್ತ ಕಟ್ಟಿಸಿಕೊಂಡರು
ಶಿವಮೊಗ್ಗದ ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ಸಂಚಾರ ವಿಭಾಗದ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡದ ಮೊತ್ತ ಕಟ್ಟಿಸಿಕೊಂಡರು   

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆಗೆ ಕಟ್ಟಬೇಕಾದ ದಂಡಕ್ಕೆ ಸರ್ಕಾರ ಶೇ 50ರಷ್ಟು ರಿಯಾಯಿತಿ ನೀಡಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಅವಕಾಶ ನೀಡಿದ್ದು, ವಾಹನ ಸವಾರರು ದಂಡ ಕಟ್ಟಲು ಸಂಚಾರ ಪೊಲೀಸ್‌ ಠಾಣೆಗೆ ದೌಡಾಯಿಸುತ್ತಿದ್ದಾರೆ.

ಸರ್ಕಾರದ ಈ ‘ಆಫರ್‌’ಗೆ ವಾಹನ ಸವಾರರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಸಾಲುಗಟ್ಟಿ ನಿಂತು ದಂಡ ಪಾವತಿಸುತ್ತಿದ್ದಾರೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಆಗಸ್ಟ್ 23ರಂದ 30ರವರೆಗೆ ಏಳು ದಿನಗಳಲ್ಲಿ ₹ 43,65,750 ದಂಡ ಸಂಗ್ರಹವಾಗಿದೆ. ಈ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 10,612 ಪ್ರಕರಣಗಳು ಮುಕ್ತಾಯವಾಗಿವೆ.

ಆಗಸ್ಟ್ 30ರಂದು (ಶನಿವಾರ) ಒಂದೇ ದಿನ ಶಿವಮೊಗ್ಗ ನಗರದಲ್ಲಿ 2,591 ಜನರು ದಂಡ ಪಾವತಿಸಿದ್ದಾರೆ. ₹ 10.39 ಲಕ್ಷ ದಂಡ ಸಂಗ್ರಹವಾಗಿದೆ. ಇದು ರಿಯಾಯಿತಿ ಅವಕಾಶವನ್ನು ಬಳಸಿಕೊಳ್ಳಲು ಸಾರ್ವಜನಿಕರ ಧಾವಂತವನ್ನು ಬಿಂಬಿಸುತ್ತಿದೆ ಎಂದು ಸಂಚಾರ ಠಾಣೆ ಪೊಲೀಸರು ಹೇಳುತ್ತಾರೆ.

ADVERTISEMENT

ನಗರದಲ್ಲೇ ಹೆಚ್ಚು ಸ್ಪಂದನೆ: 

‘ದಂಡ ಪಾವತಿಗೆ ಗ್ರಾಮೀಣರಿಗಿಂತ ನಗರದ ನಿವಾಸಿಗಳಿಂದಲೇ ಅಧಿಕ ಸ್ಪಂದನೆ ದೊರೆಯುತ್ತಿದೆ. ಮೊದಲು ಮನೆಗೆ ಚಲನ್ ಕಳುಹಿಸಿದರೂ ದಂಡ ಪಾವತಿಸುತ್ತಿರಲಿಲ್ಲ. ಈಗ ಜನರೇ ನಮ್ಮನ್ನು ಹುಡುಕಿಕೊಂಡು ಬಂದು ದಂಡ ಕಟ್ಟುತ್ತಿದ್ದಾರೆ.‍ ಪೊಲೀಸ್ ಠಾಣೆಗೆ ತೆರಳಿ ದಂಡದ ಮೊತ್ತ ಪರಿಶೀಲಿಸಿ ಪಾವತಿಸುತ್ತಿದ್ದಾರೆ’ ಎಂದು ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್ ಟಿ.ವಿ. ದೇವರಾಜ್‌ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಜಾಗೃತಿ:

ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪೊಲೀಸ್‌ ಇಲಾಖೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುತ್ತಿದೆ. ಮುಂಜಾನೆ ಮನೆ ಮನೆಗೆ ಬರುವ ಮಹಾನಗರ ಪಾಲಿಕೆಯ ಕಸ ಸಾಗಣೆ ವಾಹನಗಳು, ಸಾಮಾಜಿಕ ಜಾಲತಾಣ, ಆಟೊ ರಿಕ್ಷಾ ಮೂಲಕ ಪ್ರಚಾರ ಹಾಗೂ ಪ್ರತೀ ವೃತ್ತದಲ್ಲಿ ಅಳವಡಿಸಿರುವ ಇಟಿಎಂಎಸ್ ವ್ಯವಸ್ಥೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ.  

ಶಿವಮೊಗ್ಗದಲ್ಲಿ ಎನ್‌ಐಸಿ (ರಾಷ್ಟ್ರೀಯ ಮಾಹಿತಿ ಕೇಂದ್ರ)ಯ ಸಹಯೋಗದಿಂದ ಪ್ರಮುಖ ವೃತ್ತಗಳು ಸೇರಿದಂತೆ 12 ಕಡೆ ಪೊಲೀಸ್ ಇಲಾಖೆ ಸ್ಮಾರ್ಟ್‌ ಪೋಲ್‌ಗಳನ್ನು ಅಳವಡಿಸಿದೆ. ವಾಹನಗಳ ಚಲನವಲನದ ಮೇಲೆ ನಿರಂತರವಾಗಿ ನಿಗಾ ಇಡುತ್ತಿದೆ. ಇದು ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆ ಮಾಡಿ ದಂಡ ವಿಧಿಸಲು ನೆರವಾಗುತ್ತಿದೆ.

ಅಂಚೆ ಕಚೇರಿಯಲ್ಲೂ ವ್ಯವಸ್ಥೆ ಶೀಘ್ರ

ದಂಡ ಪಾವತಿಗೆ ಪೊಲೀಸ್ ಠಾಣೆ ಮಾತ್ರವಲ್ಲದೇ ಶೀಘ್ರ ಅಂಚೆ ಕಚೇರಿಗಳಲ್ಲೂ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಗ್ರಾಮೀಣರಿಗೂ ನೆರವಾಗಲಿದೆ. ಶಿವಮೊಗ್ಗದಲ್ಲಿ ಸಂಚಾರ ವಿಭಾಗದ ಪೂರ್ವ ಮತ್ತು ಪಶ್ಚಿಮ ಠಾಣೆ ಭದ್ರಾವತಿ ಸಂಚಾರ ಪೊಲೀಸ್ ಠಾಣೆ ಮಹಾವೀರ ವೃತ್ತ ಅಶೋಕ ಸರ್ಕಲ್ ಎ.ಎ. ಸರ್ಕಲ್ ಗೋಪಿ ಸರ್ಕಲ್ ಶಿವಪ್ಪನಾಯಕ ವೃತ್ತ ರೈಲ್ವೆ ಸ್ಟೇಶನ್ ವೃತ್ತ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ಸಂಚಾರಿ ಎಎಸ್‌ಐ ಮತ್ತು ಪಿಎಸ್‌ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳು ಮತ್ತು ಸಮೀಪದ ಪೊಲೀಸ್ ಠಾಣೆಗಳ ಮೂಲಕ ಸ್ಥಳದಲ್ಲೇ ದಂಡದ ಮೊತ್ತವನ್ನು ಕಟ್ಟಬಹುದಾಗಿದೆ ಎಂದು ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ವಿ.ದೇವರಾಜ್ ತಿಳಿಸಿದರು.

ಒಂದು ಕಾರು ₹88500 ದಂಡ! 

ಶಿವಮೊಗ್ಗ ನೋಂದಣಿಯ ಕಾರೊಂದಕ್ಕೆ ಸಂಚಾರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 44 ಪ್ರಕರಣಗಳನ್ನು ದಾಖಲಿಸಿ ಪೊಲೀಸರು ₹ 88500 ದಂಡ ವಿಧಿಸಿದ್ದಾರೆ.  ಸರ್ಕಾರದಿಂದ ರಿಯಾಯಿತಿ ದರದ ಅವಕಾಶ ಪಡೆದ ಕಾರಿನ ಮಾಲೀಕ ₹ 44250 ದಂಡ ಪಾವತಿಸಿದ್ದಾರೆ. ಅತಿ ವೇಗದ ಚಾಲನೆ ಸಿಗ್ನಲ್ ಜಂಪ್ ಚಾಲನೆ ಮಾಡುವಾಗ ಮೊಬೈಲ್‌ಫೋನ್ ಬಳಕೆ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಮೂರು ವರ್ಷ ₹ 23.37 ಕೋಟಿ ದಂಡ!

ಶಿವಮೊಗ್ಗದ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ 2023ರ ಆಗಸ್ಟ್ 28ರಂದು ಆರಂಭವಾಗಿದೆ. ಆಗಿನಿಂದ 2025ರ ಆಗಸ್ಟ್ ಅಂತ್ಯದವರೆಗೆ ಸಂಚಾರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 2.94181 ಪ್ರಕರಣ ದಾಖಲಿಸಿ ₹ 23.37 ಕೋಟಿ ಮೊತ್ತದ ದಂಡ ಹಾಕಲಾಗಿದೆ. ಮೂರು ವರ್ಷಗಳಲ್ಲಿ 56199 ಪ್ರಕರಣ ಮುಕ್ತಾಯವಾಗಿವೆ. ₹ 40902500 ದಂಡ ಸಂಗ್ರಹಿಸಲಾಗಿದೆ. ಇನ್ನೂ 237982 ಪ್ರಕರಣ ಬಾಕಿ ಇದ್ದು ವಾಹನ ಸವಾರರಿಂದ 192865000 ದಂಡ ಪಾವತಿಯಾಗಬೇಕಿದೆ ಎಂದು ಶಿವಮೊಗ್ಗ ಸಂಚಾರ ವಿಭಾಗದ ಮಾಹಿತಿ ಹೇಳುತ್ತದೆ.

ಮೊಬೈಲ್‌ಫೋನ್‌ನಲ್ಲೇ ಮಾಹಿತಿ ಲಭ್ಯ..

ಬೈಕ್ ಕಾರ್‌ ಸೇರಿದಂತೆ ಯಾವುದೇ ವಾಹನದ ಸಂಚಾರ ನಿಯಮ ಉಲ್ಲಂಘನೆಗೆ ಎಷ್ಟು ಪ್ರಕರಣ ದಾಖಲಾಗಿವೆ. ದಂಡದ ರೂಪದಲ್ಲಿ ಎಷ್ಟು ಮೊತ್ತ ಪಾವತಿಸಬೇಕಿದೆ ಎಂಬುದನ್ನು ತಿಳಿಯಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ. ಬದಲಿಗೆ ಗೂ‌ಗಲ್‌ ಪ್ಲೇ ಸ್ಟೋರ್‌ನಲ್ಲಿ mParivahan ಆ್ಯಪ್ ಡೌನ್ಲೋಡ್ ಮಾಡಿಕೊಂಡು Transport Services ಮೇಲೆ ಕ್ಲಿಕ್ ಮಾಡಿ challan Status ನಲ್ಲಿ ವಾಹನದ ಸಂಖ್ಯೆಯನ್ನು ಹಾಕಿದರೆ ಮಾಹಿತಿ ದೊರೆಯಲಿದೆ. ಇಲ್ಲವೇ Google 0r Chrome ನಲ್ಲಿ eChallan Status ಎಂದು ಸರ್ಚ್ ಮಾಡಿ ನಂತರ ಬರುವ Challan Details ಮೇಲೆ ಕ್ಲಿಕ್ ಮಾಡಿ ವಾಹನ ಸಂಖ್ಯೆ ನಮೂದಿಸಿದರೆ ಮಾಹಿತಿ ಲಭ್ಯವಾಗಲಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳುತ್ತಾರೆ.

ದೂರುಗಳಿದ್ದರೆ ಕರೆ ಮಾಡಿ:

ಪೊಲೀಸರು ಕಳುಹಿಸಿರುವ ಇ–ಚಲನ್‌ನಲ್ಲಿ ಯಾವುದೇ ತಪ್ಪು ಇಲ್ಲವೇ ದೋಷಗಳು ಇದ್ದರೆ ಬೇರೆ ವಾಹನಗಳ ಆರ್‌ಸಿ ಮಾಲೀಕರಿಗೆ ಚಲನ್ ಬಂದಿದ್ದರೆ ಆ ಬಗ್ಗೆ trafficeashi@gmail.com ವಿಳಾಸಕ್ಕೆ ಇ–ಮೇಲ್ ಕಳುಹಿಸಿ ಇಲ್ಲವೇ ಶಿವಮೊಗ್ಗ ಟ್ರಾಫಿಕ್ ಹೆಲ್ಪ್‌ಲೈನ್ ಸಂಖ್ಯೆ–8277983404 ಇಲ್ಲಿಗೆ ದೂರು ದಾಖಲಿಸಬಹುದು.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದರೆ ಆರ್‌ಸಿ ನವೀಕರಣ ಮತ್ತು ಮಾಲೀಕತ್ವ ವರ್ಗಾವಣೆ ವೇಳೆ ತೊಂದರೆ ಆಗಲಿದೆ. ಅದನ್ನು ತಪ್ಪಿಸಲು ಸರ್ಕಾರ ಕೊಟ್ಟಿರುವ ರಿಯಾಯಿತಿ ಅವಕಾಶವನ್ನು ಸವಾರರು ಬಳಸಿಕೊಳ್ಳಲಿ
ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎಸ್‌ಪಿ
ಸಂಚಾರ ನಿಯಮಗಳ ಉಲ್ಲಂಘನೆಗೆ ಬರೀ ದಂಡ ಕಟ್ಟಿಸಿಕೊಳ್ಳುತ್ತಿಲ್ಲ. ಜೀವ ರಕ್ಷಣೆ ಹಾಗೂ ಸುರಕ್ಷತೆಯ ಖಾತರಿಗಾಗಿ ನಿಯಮ ಪಾಲನೆಯ ಅಗತ್ಯವನ್ನು ಸವಾರರಿಗೆ ಒತ್ತಿ ಹೇಳುತ್ತಿದ್ದೇವೆ
ಟಿ.ವಿ. ದೇವರಾಜ್, ಸರ್ಕಲ್ ಇನ್‌ಸ್ಪೆಕ್ಟರ್, ಶಿವಮೊಗ್ಗ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.