ADVERTISEMENT

ಅಕ್ರಮ ಕಡಿತಲೆ: ಎಂಪಿಎಂ ನೌಕರನ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:26 IST
Last Updated 17 ಮೇ 2022, 4:26 IST
ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಗ್ರಾಮದ ಎಂಪಿಎಂ ನೆಡುತೋಪಿನ ಮರಗಳ ಅಕ್ರಮ ಕಡಿತಲೆ ಮಾಡಿರುವುದು
ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಗ್ರಾಮದ ಎಂಪಿಎಂ ನೆಡುತೋಪಿನ ಮರಗಳ ಅಕ್ರಮ ಕಡಿತಲೆ ಮಾಡಿರುವುದು   

ತುಮರಿ:ಇಲ್ಲಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಗ್ರಾಮದ ಎಂಪಿಎಂ ನೆಡುತೋಪಿನ ಮರಗಳ ಅಕ್ರಮ ಕಡಿತಲೆ ಮಾಡಿರುವ ಸಂಬಂಧಎಂಪಿಎಂ ವಲಯ ಅರಣ್ಯಾಧಿಕಾರಿ ಪಾಸ್ಕಲ್ ಮತ್ತು ಅರವಿಂದ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಾನುವಾರ ಸಂಜೆ ಕರೂರಿನ ಎಂಪಿಎಂನಿಂದ ಎರಡು ಲಾರಿ ಮೂಲಕ ಕೋಗಾರ್–ಕಾರ್ಗಲ್ ಮಾರ್ಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಮರಗಳನ್ನು ಅಕ್ರಮ ಸಾಗಣೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.

ಎರಡು ವರ್ಷಗಳ ಹಿಂದೆ ಎಂಪಿಎಂ ನೆಡುತೋಪು ಅಕ್ರಮ ಕಟಾವು ನಡೆಸಿದ ಪ್ರಕರಣ ದೊಡ್ಡ ಸುದ್ದಿಯಾಗಿ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಹೊಸದೊಂದು ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಎಕರೆ ಭೂಪ್ರದೇಶದಲ್ಲಿ ಎಂಪಿಎಂ ನೆಡುತೋಪು ಕಟಾವು ಪ್ರಕ್ರಿಯೆ ಒಂದು ವರ್ಷದಿಂದ ನಡೆಯುತ್ತಿತ್ತು. ವಾರದ ಹಿಂದೆ ಕಟಾವು ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಪ್ರಕರಣ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

‘ನೆಡುತೋಪಿನ ಸ್ಥಳೀಯ ನೌಕರರು ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಬಂದಿವೆ. ಈ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸುತ್ತೇವೆ’ ಎಂದು ಅರಣ್ಯಾಧಿಕಾರಿ ಪಾಸ್ಕಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಎಂಪಿಎಂ ನೌಕರ ಮಂಜುನಾಥ್ ಕೆ. ಮತ್ತು ಇತರರ ಮೇಲೆ ದೂರು ದಾಖಲಾಗಿದೆ ಎಂದು ಪಿಎಸ್ಐ ತಿರುಮಲೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.