ADVERTISEMENT

ಶಿವಮೊಗ್ಗ: ಬೇಡಿಕೆ ಈಡೇರಿಕೆಗೆ ‘ತ್ರಿಕೋನ ಕ್ರಾಂತಿ ಚಳವಳಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:05 IST
Last Updated 22 ಅಕ್ಟೋಬರ್ 2020, 4:05 IST

ಶಿವಮೊಗ್ಗ: ಇನ್ನೊಂದು ತಿಂಗಳಲ್ಲಿ ಸರ್ಕಾರ ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸದಿದ್ದಲ್ಲಿ ‘ತ್ರಿಕೋನ ಕ್ರಾಂತಿ ಚಳವಳಿ’ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ಹೇಳಿದರು.

‘ಬೇಡಿಕೆ ಈಡೇರಿಕೆಗಾಗಿ ಕಳೆದತಿಂಗಳು ಸಿಮ್ಸ್ ಎದುರು ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾಗ ಮುಖಂಡರ ವಿರುದ್ಧವೇ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಅದನ್ನು ಗೌಪ್ಯವಾಗಿಟ್ಟು ಮಧ್ಯರಾತ್ರಿ ಏಕಾಏಕಿ ನನ್ನನ್ನು ಹಾಗೂ ಸಂಘಟನೆಯ ಕಾರ್ಯದರ್ಶಿ ವೆಂಕಟೇಶ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 19 ದಿನಗಳ ನಂತರ ಜಾಮೀನು ಪಡೆದು ಹೊರಬಂದಿದ್ದೇವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇ ತಪ್ಪು ಎನ್ನುವಂತೆ ಪೊಲೀಸರು, ಅಧಿಕಾರಿಗಳು ವರ್ತಿಸಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರೂ ಬಂಧಿಸಿದ್ದರು. ಇದರಿಂದ ಹೋರಾಟಕ್ಕೆ ಸ್ಫೂರ್ತಿ ಸಿಕ್ಕಿದೆ’ ಎಂದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ‘ಹೊರಗುತ್ತಿಗೆ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಹೋರಾಟಗಾರರ ಮೇಲೆ ದೌರ್ಜನ್ಯವೆಸಗಿರುವುದನ್ನು ಖಂಡಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಹೈಕೋರ್ಟ್ ವಕೀಲ ಶಶಿಕಾಂತ್, ವೆಂಕಟೇಶ್, ಪ್ರತಾಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.