ತುಮರಿ: ನೀರು ಪೂರೈಕೆ ಇಲ್ಲದ್ದರಿಂದ ಅಡುಗೆ ಸಿದ್ಧಪಡಿಸುವುದು ಸಾಧ್ಯವಾಗುತ್ತಿಲ್ಲ. ಕಾರಣ ಕರೂರು ಹೋಬಳಿ ವ್ಯಾಪ್ತಿಯ ಕುದರೂರು ಗ್ರಾಮದ ಬೆಳಮಕ್ಕಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೇ 21ರಿಂದ ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗಿಲ್ಲ.
ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ವೇದಾವತಿ ಹೇಳುತ್ತಾರೆ.
‘ಅಂಗನವಾಡಿ ಕೇಂದ್ರಕ್ಕೆ ಜಲಜೀವನ್ ಮಿಷನ್ ಅಡಿ ಎರಡು ನಳಗಳ ಸಂಪರ್ಕ ಇದ್ದರೂ ನೀರು ಬರುತ್ತಿಲ್ಲ. ಬೇಸಿಗೆಯಲ್ಲಿ ಪಕ್ಕದಲ್ಲಿ ಇರುವ ಸರ್ಕಾರಿ ಶಾಲೆಯ ಬಾವಿಯಿಂದ ನೀರು ತಂದು ಅಡುಗೆ ಮಾಡಿದ್ದೇವೆ’ ಎಂದು ಅಂಗನವಾಡಿ ಸಹಾಯಕಿ ಸುಜಾತಾ ಹೇಳುತ್ತಾರೆ.
‘ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗೆ ಕುಡಿಯುವ ನೀರಿಗಾಗಿ ₹ 75,000 ಮೀಸಲಿಡಲಾಗಿದೆ. ಆದರೆ, ನೀರಿನ ಸಂಪರ್ಕ ನೀಡಲಾಗಿಲ್ಲ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕುದರೂರು ಗ್ರಾಮ ಪಂಚಾಯ್ತಿ ಪಿಡಿಒ ವಿಶ್ವನಾಥ್ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಮಕ್ಕಳನ್ನು ಉಪವಾಸ ಕಳುಹಿಸುವುದು ಸರಿಯಲ್ಲ. ನೀರಿನ ಸಮಸ್ಯೆ ಇರುವ ಬಗ್ಗೆ ಇಲಾಖೆಯ ಮೇಲ್ವಿಚಾರಕರು ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ ಅವರಿಗೆ ನೋಟಿಸ್ ನೀಡಲಾಗುವುದುಮಂಜುನಾಥ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಗರ
ಮನವಿಗೆ ಸ್ಪಂದನೆ ದೊರೆತಿಲ್ಲ..
‘ಅಂಗನವಾಡಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯ್ತಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಜಲಜೀವನ್ ಮಿಷನ್ ಅಡಿಯ ಸಂಪರ್ಕ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗೇ ಮುಂದುವರಿದರೆ ಮಕ್ಕಳಿಗೆ ಅಡುಗೆ ತಯಾರಿಸಲು ಸಮಸ್ಯೆ ಆಗಲಿದೆ’ ಎಂದು ವೇದಾವತಿ ಅಳಲು ತೋಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.