ಶಿವಮೊಗ್ಗ: ‘ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಹತೆಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ಹಿರಿತನ ಹಾಗೂ ಮಾನವೀಯತೆ ದೃಷ್ಠಿಯಿಂದ ಸೇವೆಯಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಬೇಕು’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ರಾಜ್ಯ ಘಟಕ ಅಧ್ಯಕ್ಷ ಸೋಮಶೇಖರ ಎಚ್. ಶಿಮೊಗ್ಗಿ ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯು ರೈತ ಸಂಘ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಹಿಂದುಳಿದ ಜನಜಾಗೃತಿ ವೇದಿಕೆ, ನಿವೃತ್ತ ನೌಕಕರ ಸಂಘ ಸಹಯೋಗದಲ್ಲಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಸತ್ಯಾಗ್ರಹ ಸಭೆಯಲ್ಲಿ ಮಾತನಾಡಿದರು.
ಯುಜಿಸಿಯ ಅರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹತ್ತಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಜೀವನ ಅತಂತ್ರ ಸ್ಥಿತಿಗೆ ತಲುಪಿದ್ದು, ಕೂಲಿ ಕಾರ್ಮಿಕರೇ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಉಪನ್ಯಾಸಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಮೂಲಕ ಸರ್ಕಾರ ಹೊಸ ರೋಗವನ್ನು ಅಂಟಿಸಿಕೊಳ್ಳಲು ಹೊರಟಿದೆ. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಂಡು ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಖಾಯಂ ನೌಕರರೆಂದು ಪರಿಗಣಿಸಬೇಕು ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ ಒತ್ತಾಯಿಸಿದರು.
‘ರಾಜ್ಯದಲ್ಲಿ 5000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡಲು ಸರ್ಕಾರ ಸಿದ್ಧತೆ ನಡೆಸಿದೆ. ಆಳುವ ಸರ್ಕಾರಗಳು ಜನಸಾಮಾನ್ಯರ ಸಮಸ್ಯೆ ಆಲಿಸುವ ಕಿವಿಯಾಗಬೇಕು. ಆದರೆ, ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಿವೆ. ಇದು ಸರಿಯಲ್ಲ ಎಂದು ಡಿವಿಎಸ್ ಕಾಲೇಜು ನಿವೃತ್ತ ಪ್ರಾಚಾರ್ಯ ಪ್ರೊ. ರಾಚಪ್ಪ ದೂರಿದರು.
ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಮಹಿಳಾ ಸಂಯೋಜಕಿ ಎನ್.ಜೆ. ದೀಪಾ, ಪ್ರಮುಖರಾದ ನಟರಾಜ್, ಚಂದ್ರಪ್ಪ, ಅಣ್ಣಪ್ಪ, ಧನಂಜಯಪ್ಪ, ವಸಂತ ಕುಮಾರ್, ಸಂದೀಪ್ ಕುಮಾರ್ ಇದ್ದರು.
ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿ.ಎಸ್.ವಿ.ರಾಜಮ್ಮ ಸಂಚಾಲಕಿ ಹಿಂದುಳಿದ ಜನಜಾಗೃತಿ ವೇದಿಕೆ
‘ವಿದ್ಯಾರ್ಥಿ ಭವಿಷ್ಯದ ಮೇಲೆ ಪರಿಣಾಮ’
ರಾಜ್ಯದಲ್ಲಿ ಕಾಲೇಜುಗಳು ಆರಂಭಗೊಂಡು 1 ತಿಂಗಳು ಕಳೆದಿದೆ. ಉಪನ್ಯಾಸಕರ ಸಮಸ್ಯೆಗೆ ಪರಿಹಾರ ಸಿಗದೆ ಪಾಠದಲ್ಲಿ ಹಿನ್ನಡೆಯಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡ ಸರ್ಕಾರ ಖಾಸಗಿ ಒಡೆತನದ ಸಂಸ್ಥೆಗಳಿಗೆ ಬೆಂಬಲ ನೀಡುತ್ತಿದೆ ಎನ್ನುವ ಅನುಮಾನವಿದೆ. ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಡಿವಿಎಸ್ ಕಾಲೇಜು ನಿವೃತ್ತ ಪ್ರಾಚಾರ್ಯ ಪ್ರೊ. ರಾಚಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.