ADVERTISEMENT

ಆನ್‍ಲೈನ್ ತರಗತಿ ಪ್ರಾರಂಭಿಸಲು ಯುಜಿಸಿ ಅನುಮತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:01 IST
Last Updated 18 ಜೂನ್ 2021, 5:01 IST
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಹೊರನೋಟ.
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಹೊರನೋಟ.   

ಶಂಕರಘಟ್ಟ: ಪೂರ್ಣ ಪ್ರಮಾಣದಲ್ಲಿ ಆನ್‍ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಕುವೆಂಪು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅನುಮತಿ ದೊರಕಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಯುಜಿಸಿ, ದೇಶದಾದ್ಯಂತ 38 ವಿಶ್ವವಿದ್ಯಾಲಯಗಳಿಗೆ ಆನ್‍ಲೈನ್ ಮಾದರಿಯಲ್ಲಿ ತರಗತಿ ಪ್ರಾರಂಭಿಸಲು ಅವಕಾಶ ನೀಡಿದೆ.

ಕರ್ನಾಟಕದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜತೆಗೆ ಜೈನ್, ಯೆನೋಪಾಯ ಮತ್ತು ಮೈಸೂರು ವಿಶ್ವವಿದ್ಯಾಲಯಕ್ಕೂ ಅನುಮತಿ ಸಿಕ್ಕಿದೆ. ಮೈಸೂರು ವಿಶ್ವವಿದ್ಯಾಲಯಕ್ಕೆ ವಾಣಿಜ್ಯ ತರಗತಿಗಳನ್ನು ಮಾತ್ರ ನಡೆಸಲು ಅನುಮತಿ ದೊರಕಿದ್ದು, ಯೆನೋಪಾಯ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿ ಮಾತ್ರ ಪ್ರಾರಂಭಿಸಬಹುದು. ಆದರೆ, ಕುವೆಂಪು ವಿ.ವಿ.ಯು ಬಿಬಿಎಂ, ಬಿ.ಕಾಂ ಮತ್ತು ಬಿ.ಎ ಸ್ನಾತಕ ಕೋರ್ಸ್‌ಗಳ ಜತೆಗೆ ಎಂಬಿಎ, ಎಂಕಾಂ ಮತ್ತು ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್ ಮತ್ತು ಕನ್ನಡ ವಿಷಯಗಳಲ್ಲಿ ಎಂಎ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ಪಡೆದಿದೆ. 2020–21ನೇ ಸಾಲಿನಿಂದ ಈ ಎಲ್ಲ ಕೋರ್ಸ್‌ಗಳನ್ನು ಪ್ರಾರಂಭಿಸಲು ಪ್ರತ್ಯೇಕ ಅನುಮತಿ ಪಡೆಯಬೇಕಿಲ್ಲ ಎಂದು ಯುಜಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ADVERTISEMENT

ಕುವೆಂಪು ವಿ.ವಿ ನ್ಯಾಕ್‌ನಿಂದ ‘ಎ’ ಶ್ರೇಣಿ ಪಡೆದಿದ್ದು, ಕೇಂದ್ರ ಸರ್ಕಾರದ ಎನ್ಐಆರ್‌ಎಫ್‌ನಲ್ಲಿ 73ನೇ ರ‍್ಯಾಂಕ್ ಪಡೆದಿದೆ. ಇನ್ನು ಇತ್ತೀಚಿಗೆ ತಾನೆ ಬಿಡುಗಡೆಯಾದ ಸೈಮಾಗೋ ರ‍್ಯಾಂಕಿಂಗ್‍ನಲ್ಲಿ 56ನೇ ಸ್ಥಾನ ಪಡೆದು ದೇಶದ ಮುಂಚೂಣಿಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತಲಿದೆ. ಈಗಾಗಲೇ ವಿಶ್ವವಿದ್ಯಾಲಯವು ಆನ್‌ಲೈನ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ವಿಶ್ವವಿದ್ಯಾಲಯದ ವೆಬ್‍ಸೈಟ್‍ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

‘ಕೊರೊನಾ ಉನ್ನತ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಎಷ್ಟು ನಿಜವೋ, ಹೊಸ ಸಾಧ್ಯತೆಗಳ ಕಡೆಗೆ ಚಿಂತಿಸುವಂತೆ ಮಾಡಿರುವುದು ಅಷ್ಟೇ ನಿಜ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯೇ ಅಂತರ್ಜಾಲ ತಂತ್ರಜ್ಞಾನದ ಕಡೆಗೆ ವಾಲಿರುವುದು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳಲೇಬೇಕು. ಆನ್‍ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶ ದೊರಕಿರುವ ದೇಶದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಒಂದು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ’ ಎಂದು
ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.

‘ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ದೂರಶಿಕ್ಷಣ ಕೋರ್ಸ್‍ಗಳನ್ನು ನಡೆಸಲು ಕೇವಲ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಅನುಮತಿ ನೀಡಿ ಉಳಿದ ವಿಶ್ವವಿದ್ಯಾಲಯಗಳು ಕೋರ್ಸ್‌ಗಳನ್ನು ನಿಲ್ಲಿಸುವಂತೆ ತಿದ್ದುಪಡಿ ತಂದ ಬಳಿಕ ಹಿನ್ನಡೆ ಅನುಭವಿಸಿದ್ದ ಕುವೆಂಪು ವಿಶ್ವವಿದ್ಯಾಲಯ, ಈಗ ಆನ್‍ಲೈನ್ ಕೋರ್ಸ್‌ಗಳನ್ನು
ನಡೆಸಲು ಯುಜಿಸಿ ಅನುಮತಿ ಪಡೆದಿರುವುದು ಹರ್ಷದಾಯಕ’ ಎಂದು ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.