ADVERTISEMENT

ಭದ್ರಾ ಬಲದಂಡೆ ನಾಲೆ; ಜುಲೈ 15ರಿಂದ ನೀರು ಹರಿಸಿ

ತಪ್ಪಿದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಚಳವಳಿ: ಎಚ್.ಆರ್.ಬಸವರಾಜಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:03 IST
Last Updated 27 ಜೂನ್ 2025, 16:03 IST
ಎಚ್.ಆರ್.ಬಸವರಾಜಪ್ಪ
ಎಚ್.ಆರ್.ಬಸವರಾಜಪ್ಪ   

ಶಿವಮೊಗ್ಗ: ‘ಒಡೆದು ಹಾಕಿರುವ ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಕರ್ನಾಟಕ ನೀರಾವರಿ ನಿಗಮ ಜೂನ್ 15ರೊಳಗೆ ದುರಸ್ತಿಗೊಳಿಸಿ ಮಳೆಗಾಲದ ಬೆಳೆಗೆ ನೀರು ಹರಿಸಲಿ. ಇಲ್ಲದಿದ್ದರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರೈತರ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಎಚ್ಚರಿಸಿದರು.

‘ವಾಡಿಕೆಯಂತೆ ಮಳೆಗಾಲದ ಬೆಳೆಗೆ ನೀರು ಹರಿಸದಿದ್ದಲ್ಲಿ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ 1 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ನಾಟಿಗೆ ತೊಂದರೆ ಆಗಲಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಲಜೀವನ್ ಮಿಷನ್ ಅಡಿ ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಹಳ್ಳಿಗಳಿಗೆ ಕುಡಿಯುವ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ ಬಲದಂಡೆ ನಾಲೆಯನ್ನು ಸೀಳಿ ನೀರು ಹರಿಸುವುದಕ್ಕೆ ವಿರೋಧವಿದೆ. ಅದು ಅತ್ಯಂತ ಅವೈಜ್ಞಾನಿಕ. ಒಡೆದು ಹಾಕಿರುವ ಬಲದಂಡೆ ನಾಲೆಯನ್ನು ತಕ್ಷಣವೇ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಲದಂಡೆ ನಾಲೆಯ ಬದಲಿಗೆ ನೇರವಾಗಿ ನದಿಪಾತ್ರದಿಂದಲೇ ನೀರು ಕೊಡಲಿ. ಇಲ್ಲವೇ ಜಲಾಶಯದಿಂದ ಜಾಕ್‌ವೆಲ್‌ ಮೂಲಕ ನೀರು ಹರಿಸಲಿ’ ಎಂದರು.

‘ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಈಗಿನ ಮಳೆ ಪರಿಸ್ಥಿತಿ ಗಮನಿಸಿದರೆ ಮುಂದಿನ 20 ದಿನಗಳಲ್ಲಿ ಜಲಾಶಯ ಭರ್ತಿ ಆಗಲಿದೆ. ಇಂತಹ ಹೊತ್ತಿನಲ್ಲಿ ನಾಲೆಯನ್ನು ಒಡೆದು ಕಾಮಗಾರಿ ನಡೆಸಿದರೆ ನೀರು ಹರಿಸುವುದು ಯಾವಾಗ’ ಎಂದು ಪ್ರಶ್ನಿಸಿದರು.

ರೈತ ಸಂಘದ ಮುಖಂಡರಾದ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಸಿ.ಬಿ.ಹನುಮಂತಪ್ಪ, ರವಿ, ಮಂಜಪ್ಪ, ಸಿ. ಚಂದ್ರಪ್ಪ ಇದ್ದರು.

ಜುಲೈ 15ರಿಂದ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಬಿಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ರೈತ ಸಂಘ ಹೋರಾಟಕ್ಕೆ ಇಳಿಯಲಿದೆ.
– ಎಚ್.ಆರ್.ಬಸವರಾಜಪ್ಪ, ರೈತ ಸಂಘ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.