ಶಿವಮೊಗ್ಗ: ‘ರಾಜ್ಯದಲ್ಲಿ ವಕ್ಫ್ ಆಸ್ತಿಯನ್ನು ಶ್ರೀಮಂತ ಮುಸ್ಲಿಮರು ಹಾಗೂ ಕಾಂಗ್ರೆಸ್ ನಾಯಕರು ಕಬಳಿಕೆ ಮಾಡಿದ್ದಾರೆ. ಆ ಬಗ್ಗೆ ವಕ್ಫ್ ಮಂಡಳಿಯ ಹಿಂದಿನ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ನೀಡಿದ್ದ ವರದಿಯನ್ನು ಸರ್ಕಾರ ಬಹಿರಂಗೊಳಿಸಬೇಕು’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
‘ವಕ್ಫ್ ತಿದ್ದುಪಡಿ ಮಸೂದೆ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿರುವ ಕೇಂದ್ರದ ಜಂಟಿ ಸಂಸದೀಯ ಸಮಿತಿಯ ಸಭೆ ಸೋಮವಾರ ದೆಹಲಿಯಲ್ಲಿ ನಡೆದಿದ್ದು, ಈ ವೇಳೆ ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ರಾಜ್ಯದಲ್ಲಿನ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಲ್ಲಿನ ವಕ್ಫ್ ಹಗರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ಕೆ. ರೆಹಮಾನ್ ಖಾನ್ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಸಭೆಯಲ್ಲಿ ಅವರು ಆರೋಪ ಮಾಡಿದ ಕಾರಣಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಭೆ ಬಹಿಷ್ಕಾರ ಮಾಡಿವೆ. ಅದು ಸರಿಯಲ್ಲ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನ್ವರ್ ಮಾಣಿಪ್ಪಾಡಿ ಅವರು ಜೀವ ಬೆದರಿಕೆ ಇದ್ದರೂ ಅದನ್ನು ಲೆಕ್ಕಿಸದೆ ವರದಿ ನೀಡಿದ್ದಾರೆ. ಆಗಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೂ ಬೆದರಿಕೆ ಇತ್ತು. ಇಬ್ಬರಿಗೂ ರಾಜ್ಯ ಸರಕಾರ ರಕ್ಷಣೆ ನೀಡಬೇಕು. ಬಡವರ ಆಸ್ತಿ ಲೂಟಿ ಮಾಡಲಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಆರೋಪಿಗಳ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವುದು ಆಘಾತಕಾರಿ ಬೆಳವಣಿಗೆ. ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿಲ್ಲ. ಸರ್ಕಾರ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಂತಿದೆ. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗೂ ರಕ್ಷಣೆ ಸಿಗದಂತಾಗಬಹುದು ಎಂದು ಈಶ್ವರಪ್ಪ ಹೇಳಿದರು.
ಜಾತಿ ಗಣತಿಯನ್ನು ಸರ್ಕಾರ ಅಂಗೀಕಾರ ಮಾಡಬೇಕು. ಅ.18ರಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ, ಇದೀಗ ಅ. 25ಕ್ಕೆ ಚರ್ಚಿಸುವುದಾಗಿ ಹೇಳಿದ್ದಾರೆ. ಸರ್ಕಾರ ಉತ್ತರ ಕುಮಾರನ ಪೌರುಷ ತೋರಿಸಬಾರದು. ಇಷ್ಟು ದಿನ ಕಾದಿದ್ದೇವೆ, ಇನ್ನೊಂದು ವಾರ ಕಾಯುತ್ತೇವೆ. ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಆಪತ್ತು ಬಂದಾಗಲಷ್ಟೇ ಜಾತಿ ಗಣತಿ ನೆನಪು ಮಾಡಿಕೊಳ್ಳಬಾರದು ಎಂದರು.
ಇ. ವಿಶ್ವಾಸ್, ರಮೇಶ್ ಸಜ್ಜಗಾರ ಗದಗ, ಕುಬೇರಪ್ಪ, ಜಗದೀಶ್, ಶಂಕರ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.