ADVERTISEMENT

ನಸುಕಿನ ಸಿಹಿ ನಿದ್ರೆ ಕಸಿದ ವರುಣ

ಬೆಂಕಿನಗರ, ಅಣ್ಣಾ ನಗರದಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:52 IST
Last Updated 31 ಜುಲೈ 2022, 5:52 IST
ಶಿವಮೊಗ್ಗದ ಅಣ್ಣಾನಗರ 3ನೇ ಕ್ರಾಸ್‌ನಲ್ಲಿ ಮನೆಯೊಳಗೆ ನುಗ್ಗಿದ ಮಳೆಯ ನೀರನ್ನು ಶನಿವಾರ ಮುಂಜಾನೆ ಮಹಿಳೆಯೊಬ್ಬರು ಮೊಗೆದು ಹೊರಗೆ ಹಾಕಿದರು.
ಶಿವಮೊಗ್ಗದ ಅಣ್ಣಾನಗರ 3ನೇ ಕ್ರಾಸ್‌ನಲ್ಲಿ ಮನೆಯೊಳಗೆ ನುಗ್ಗಿದ ಮಳೆಯ ನೀರನ್ನು ಶನಿವಾರ ಮುಂಜಾನೆ ಮಹಿಳೆಯೊಬ್ಬರು ಮೊಗೆದು ಹೊರಗೆ ಹಾಕಿದರು.   

ಶಿವಮೊಗ್ಗ: ನಗರದಲ್ಲಿ ಶನಿವಾರ ನಸುಕಿನಲ್ಲಿ ಸುರಿದ ಭಾರಿ ಮಳೆ ಶ್ರಾವಣ ಮಾಸದಲ್ಲಿ ಮಳೆಯ ಸಮೃದ್ಧಿಗೆ ಇಂಬು ನೀಡಿತು. ಬೆಳಗಿನ ಜಾವ 3ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಎರಡೂವರೆ ತಾಸು ಆರ್ಭಟಿಸಿತು. ಈ ಅವಧಿಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 4.8 ಸೆಂ.ಮೀ. ಮಳೆ ಸುರಿದಿದೆ.

ಗುಡುಗು–ಮಿಂಚು ಸಹಿತ ಒಂದೇ ಸಮನೆ ಆದ ವರ್ಷಧಾರೆಯಿಂದ ನಸುಕಿನ ಸಿಹಿ ನಿದ್ರೆಯಲ್ಲಿದ್ದ ಜನರು ಅಕ್ಷರಶಃ ತತ್ತರಿಸಿದರು. ಮಳೆಯ ಬಿರುಸು ಕಂಡು ಬೆಚ್ಚಿಬಿದ್ದರು. ಮಳೆಯಿಂದಾಗಿ ರಾಜ ಕಾಲುವೆ ಸೇರಿ ಗುಂಡಿಗಳು, ಚರಂಡಿಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿತು. ಅಣ್ಣಾ ನಗರ, ಬೆಂಕಿ ನಗರ, ಸಾಗರ ರಸ್ತೆಯ ಶ್ರೀರಾಮ ನಗರದ ವಾರ್ಡ್ ನಂ 18ರಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಫ್ರಿಜ್, ಟಿವಿ, ಮನೆಯಲ್ಲಿನ ವಸ್ತುಗಳು, ಮಕ್ಕಳ ಪುಸ್ತಕ, ಆಹಾರ ಸಾಮಗ್ರಿಗಳು ಮಳೆ ನೀರು ನುಗ್ಗಿ ಹಾನಿಗೀಡಾಗಿವೆ.

ಒಳಚರಂಡಿಯ ನೀರು ಮನೆಯೊಳಗೆ ನುಗ್ಗಿದೆ. ದುರ್ವಾಸನೆ ತಡೆಯಲಾರದೇ ಮಳೆಯಲ್ಲಿಯೇ ಮನೆಯಿಂದ ಹೊರಗೆ ಬಂದು ಕಾಲಕಳೆಯಬೇಕಾಯಿತು. ಅಣ್ಣಾನಗರದ ತಗ್ಗು ಪ್ರದೇಶಗಳಾದ ಮೂರನೇ ತಿರುವಿನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿತ್ತು.

ADVERTISEMENT

ನಾಲ್ಕೈದು ವರ್ಷಗಳಿಂದ ಸಣ್ಣ ಮಳೆಗೂ ಮನೆಗಳಿಗೆ ನೀರು ನುಗ್ಗುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳೇ ಇದಕ್ಕೆ ಕಾರಣ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಗೂ ನೀರು ನುಗ್ಗಿತ್ತು. ರಾತ್ರಿಯಿಡಿ ನಿದ್ದೆ ಇಲ್ಲದೇ ಕಾಲ ಕಳೆದಿದ್ದೆವು. ಪಾಲಿಕೆಯ ಕಂದಾಯ ಅಧಿಕಾರಿಗಳು ಹಾನಿಯ ಅಂದಾಜು ಪಟ್ಟಿ ಸಿದ್ಧಪಡಿಸಿಕೊಂಡು ಹೋಗಿದ್ದು ಬಿಟ್ಟರೆ ಯಾವುದೇ ಪರಿಹಾರ ನೀಡಿಲ್ಲ’ ಎಂದು ನಿವಾಸಿಗಳು ದೂರಿದರು.

‘ನಮಗೆ ₹10 ಸಾವಿರ ಪರಿಹಾರ ಬೇಡ. ಮೆಗ್ಗಾನ್ ಆಸ್ಪತ್ರೆಯ ತ್ಯಾಜ್ಯದಿಂದ ಹಿಡಿದು ಪೊಲೀಸ್
ಕ್ವಾಟ್ರಸ್ ಹೆಲಿಪ್ಯಾಡ್ ವೃತ್ತದಿಂದ ಎಲ್ಲಾ ತ್ಯಾಜ್ಯವೂ ದೊಡ್ಡ ಚಾನಲ್‌ನಿಂದ ಸಣ್ಣ ಮೋರಿಗೆ ಹರಿದು ಸಮಸ್ಯೆ ತಲೆದೋರಿದೆ. ನಮಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದುಆಗ್ರಹಿಸಿದರು.

ಬೆಂಕಿನಗರದ ಕೆಲವು ಮನೆಗಳಿಗೆ ಯುಜಿಡಿ ನೀರು ನುಗ್ಗಿದೆ. ಒಳಚರಂಡಿ ಮಂಡಳಿಯ ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೋಟ–ಗದ್ದೆಗಳಿಗೆ ನೀರು: ಹೊಳೆಹೊನ್ನೂರು ಭಾಗದ ಮೈದೊಳಲು, ಮಲ್ಲಿಗೇನಹಳ್ಳಿ, ಹನುಮಂತಾಪುರದಲ್ಲಿ ಭಾರಿ ಮಳೆಯಾಗಿದೆ. ಮೈದೊಳಲಿನ ಕುಬೇಂದ್ರಪ್ಪ ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಆಗರದಳ್ಳಿ ಗ್ರಾಮದ ಎಕೆ ಕಾಲೊನಿಯಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿತ್ತು. ಮನೆಗಳಿಗೆ ನೀರು ನುಗ್ಗಿ, ರಸ್ತೆಗಳು ಜಲಾವೃತವಾಗಿದ್ದವು.

ಮಲ್ಲಾಪುರ ಗ್ರಾಮದ ಸಮೀಪ ಭದ್ರಾ ನಾಲೆ ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ಪಕ್ಕದ ತೋಟ–ಗದ್ದೆಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.