ಶಿಕಾರಿಪುರ: ‘ಪುರಾಣದಲ್ಲಿ ನಕಾರಾತ್ಮಕ ಶಕ್ತಿ ನಿವಾರಣೆಗೆ ವೀರಭದ್ರ ದೇವರು ಶ್ರಮಿಸಿದ ಬಗ್ಗೆ ಉಲ್ಲೇಖವಿದೆ. ಇಂದಿಗೂ ವೀರಭದ್ರನ ಗುಗ್ಗುಳದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ’ ಎಂದು ಕಡೇನಂದಿಹಳ್ಳಿ ತಪೋಕ್ಷೇತ್ರದ ರೇವಣಸಿದ್ಧ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ವೀರಭದ್ರೇಶ್ವರ ಜಯಂತೋತ್ಸವ ಸೇವಾ ಸಮಿತಿ ಆಯೋಜಿಸಿದ್ದ ಶರಭಿ ಗುಗ್ಗುಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಕಾರಾತ್ಮಕ, ಕ್ರೀಯಾಶೀಲ, ಸತ್ಯ–ಧರ್ಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆಸುತ್ತಿರುವ ಗುಗ್ಗುಳದಿಂದ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲು ಕಾರಣವಾಗಲಿ ಎಂದು ಶುಭ ಹಾರೈಸಿದರು.
ನಾಡಿನಲ್ಲಿ ದೊರೆತ ಹಲವಾರು ಶಾಸನಗಳಲ್ಲಿ ವೀರಭದ್ರ ದೇವರ ಅಸ್ತಿತ್ವದ ಉಲ್ಲೇಖವಿದೆ. ಆಂಧ್ರ ಪ್ರದೇಶದ ರಾಯಚೋಟಿಯಲ್ಲಿ ವೀರಭದ್ರ ಮೊದಲು ಅವತಾರ ತಾಳಿದ್ದ ಎಂದು ಹೇಳಲಾಗಿದೆ. ಕರ್ನಾಟಕ ಮಾತ್ರವಲ್ಲದೇ ದೇಶ–ವಿದೇಶಗಳಲ್ಲೂ ವೀರಭದ್ರ ದೇವರ ಕುರುಹು ಇದೆ ಎಂದು ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಪುರಸಭೆ ಎದುರಿನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಗುಗ್ಗುಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನೂರಾರು ಭಕ್ತರು ಶ್ರದ್ಧಾ–ಭಕ್ತಿಯಿಂದ ಪಾಲ್ಗೊಂಡಿದ್ದರು. ವಿರಕ್ತ ಮಠದಲ್ಲಿ ಅನ್ನಸಂತರ್ಪಣೆ ನಡೆಯಿತು. ವೀರಭದ್ರೇಶ್ವರ ಜಯಂತೋತ್ಸವ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.