ಶಿವಮೊಗ್ಗ: ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅವರ ವಚನಗಳು ಬದುಕಿನ ಮೇಲೆ ಪರಿಣಾಮ ಬೀರಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ವಿದ್ಯುತ್ ಇಲಾಖೆಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಸಂಘದ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಸವಣ್ಣವರ ಒಂದು ವಚನವನ್ನಾದರೂ ಘೋಷವಾಕ್ಯವಾಗಿ ಮನೆಯಲ್ಲಿ ರೂಢಿಸಿಕೊಳ್ಳಬೇಕು. ಅದಕ್ಕೆ ಬದ್ಧವಾಗಿ ಇಡೀ ಕುಟುಂಬ ನಡೆದುಕೊಳ್ಳಬೇಕು. ಪ್ರಸ್ತುತ ಬಸವಣ್ಣನನ್ನು ಪಾಂಡಿತ್ಯ ಪ್ರದರ್ಶನಕ್ಕೆ ಬಳಸುತ್ತಿದ್ದೇವೆ. ವಚನಗಳು ಭಾಷಣ ಸೊಗಸಿಗೆ ಬಳಕೆ ಆಗುತ್ತಿವೆಯೇ ವಿನಾ ಬದುಕಿನಲ್ಲಿ ರೂಢಿಸಿಕೊಳ್ಳುತ್ತಿಲ್ಲ. ದಾಸರ ಮೇಲೆಯೂ ಶರಣರ ವಚನಗಳು ಪರಿಣಾಮ ಬೀರಿದ್ದವು. ಹಾಗಾದರೆ, ನಮ್ಮ ಮೇಲೆ ಯಾವ ವಚನ ಪ್ರಭಾವ ಬೀರುತ್ತಿದೆ’ ಎಂದು ಪ್ರಶ್ನಿಸಿದರು.
ದಾರ್ಶನಿಕರ ಜನ್ಮದಿನದಂದು ರಜೆ ಏಕೆ
ಬಸವಾದಿ ಶರಣರಾದಿಯಾಗಿ ಅನೇಕ ದಾರ್ಶನಿಕರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ‘ಕಾಯಕವೇ ಕೈಲಾಸ’ ಎಂದು ಪ್ರತಿಪಾದಿಸಿದ ಬಸವಣ್ಣನವರ ಜಯಂತಿಯಂದೂ ರಜೆ ನೀಡಲಾಗುತ್ತಿದೆ. ಅದರ ಬದಲು ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಇದು ಒಳಜಾತಿಗಳನ್ನು ಪ್ರೀತಿಸುವವರು ಬಸವಣ್ಣನಿಗೆ ಅಪಮಾನ ಮಾಡುತ್ತಿದ್ದಾರೆ ಎಂದರ್ಥ ಎಂದು ಬೇಸರಿಸಿದರು.
ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾನಪದ ವಿದ್ವಾಂಸ ಶಂಭು ಬಳಿಗಾರ ಉಪನ್ಯಾಸ ನೀಡಿದರು.
ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರ್, ಕಾರ್ಯಾಧ್ಯಕ್ಷ ಎಂ.ಆರ್. ಜಯದೇವಪ್ಪ, ಪ್ರಮುಖರಾದ ಎಸ್.ಪಿ. ದಿನೇಶ್, ರುದ್ರಮುನಿ ಸಜ್ಜನ್, ಎಚ್.ಎನ್. ಮಹಾರುದ್ರ, ಎಸ್.ಪಿ. ಮೋಹನ ಕುಮಾರ್, ಜಯದೇವಪ್ಪ ಇದ್ದರು.
ಗೌರವಯುತ ಬದುಕು ಕಲ್ಪಿಸಿಕೊಟ್ಟ ಬಸವಣ್ಣ: ಸ್ವಾಮೀಜಿ
‘ಬಸವಣ್ಣ ಎಲ್ಲರಿಗೂ ಗೌರವಯುತವಾಗಿ ಬದುಕುವ ಅವಕಾಶ ಮಾಡಿದರು. ಸಮಾಜದಲ್ಲಿರುವ ಮೇಲು ಮತ್ತು ಕೀಳರಿಮೆ ಭಾವನೆಯನ್ನು ತೊಡೆಯುವ ಕೆಲಸವನ್ನು ಮಾಡಿದರು. ಮಾದಾರ ಚನ್ನಯ್ಯನನ್ನು ಅವರು ಅಪ್ಪನೆಂದು ಸಂಬೋಧಿಸಿದ್ದಾರೆ. ಬಸವಣ್ಣನವರು ಚುಂಬಕ ಶಕ್ತಿಯಾಗಿ ಕೆಲಸ ಮಾಡಿದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪ್ರಪಂಚಕ್ಕೆ ತೋರಿಸಿದ್ದಾರೆ’ ಎಂದು ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
‘ಅನುಭವ ಮಂಟಪವೇ ಇರಲಿಲ್ಲ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಅನುಭವ ಮಂಟಪವೆಂದರೆ ‘ಸಂವಾದ ಪರಂಪರೆಯ ಅತ್ಯುತ್ಕೃಷ್ಟವಾದ ಅಭಿವ್ಯಕ್ತಿ. ಪ್ರಪಂಚದಲ್ಲಿ ಸಾಕಷ್ಟು ಸಂವಾದಗಳು ನಡೆದಿವೆ. ಆದರೆ ಇಲ್ಲಿ ಅಕ್ಷರದ ಪರಿಚಯವಿಲ್ಲದ ಮುಖ್ಯವಾಹಿನಿ ಎಂದರೆ ಗೊತ್ತೇ ಇಲ್ಲದವರ ಜತೆ ನಡೆದ ಚರ್ಚೆಗಳಾಗಿವೆ. ಶರಣರ ವಚನಗಳಿಂದ ದಾಸರು ಪ್ರಭಾವಕ್ಕೆ ಒಳಗಾಗಿದ್ದಾರೆ. ಅನೇಕ ದಾಸರ ಪದಗಳಲ್ಲಿ ಶರಣರ ವಚನಗಳಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.