ADVERTISEMENT

ಲಾಂಚ್‌ ಸ್ಥಳಾಂತರಕ್ಕೆ ಯತ್ನ: ಗ್ರಾಮಸ್ಥರ ಪ್ರತಿಭಟನೆ

ಮುಪ್ಪಾನೆ ಹಲ್ಕೆ ಕಡವು ಮಾರ್ಗ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:19 IST
Last Updated 28 ಫೆಬ್ರುವರಿ 2021, 5:19 IST
ಕಾರ್ಗಲ್ ಸಮೀಪದ ಮುಪ್ಪಾನೆ ಹಲ್ಕೆ ಕಡವು ಮಾರ್ಗದಲ್ಲಿ ಇರುವ ಲಾಂಚ್‌ ಏರಿ ಪ್ರತಿಭಟನೆ ನಡೆಸಿದ ಭಾರಂಗಿ ಹೋಬಳಿಯ ಗ್ರಾಮಸ್ಥರು.
ಕಾರ್ಗಲ್ ಸಮೀಪದ ಮುಪ್ಪಾನೆ ಹಲ್ಕೆ ಕಡವು ಮಾರ್ಗದಲ್ಲಿ ಇರುವ ಲಾಂಚ್‌ ಏರಿ ಪ್ರತಿಭಟನೆ ನಡೆಸಿದ ಭಾರಂಗಿ ಹೋಬಳಿಯ ಗ್ರಾಮಸ್ಥರು.   

ಕಾರ್ಗಲ್: ಸಮೀಪದ ಮುಪ್ಪಾನೆ ಹಲ್ಕೆ ಕಡವು ಮಾರ್ಗದಲ್ಲಿ ಸ್ಥಳೀಯ ಜಲಸಾರಿಗೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಿನಿ ಲಾಂಚ್ ಅನ್ನು ಬೇರೆಡೆ ಸ್ಥಳಾಂತರಿಸುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಧರಣಿ ನಡೆಸಿದರು.

ವಿಶ್ವ ವಿಖ್ಯಾತ ಜೋಗ ಜಲಪಾತ ಮತ್ತು ಸಿಗಂದೂರು ದೇವಾಲಯ ಸಂಪರ್ಕ ರಸ್ತೆ ಮಾರ್ಗದಲ್ಲಿ ಸುಮಾರು 85 ಕಿ.ಮೀ ಕ್ರಮಿಸಬೇಕಾಗುತ್ತದೆ. ಹಾಲಿ ಇರುವ ಜಲ ಮಾರ್ಗದಲ್ಲಿ ಕೇವಲ 45 ಕಿ.ಮೀ ಅಂತರದಲ್ಲಿ ತಲುಪಬಹುದಾದ ಸೌಲಭ್ಯ ಮುಪ್ಪಾನೆ ಕಡವು ಮಾರ್ಗದ್ದಾಗಿದೆ. ಇಲ್ಲಿ ಬಳಕೆಯಾಗುತ್ತಿದ್ದ ಹೊಸ ಲಾಂಚ್ ಸೇವೆಯನ್ನು ಕೋಗಾರ್ ಶಿಗ್ಗಲು ಹೊಸ ಸಂಪರ್ಕ ಮಾರ್ಗಕ್ಕೆ ಬಳಸುವ ಉದ್ದೇಶದಿಂದ ಸ್ಥಳಾಂತರಕ್ಕೆ ತಾಲ್ಲೂಕು ಆಡಳಿತದ ಸೂಚನೆಯ ಮೇರೆಗೆ ಅಧಿಕಾರಿಗಳು ಶುಕ್ರವಾರ ಸಜ್ಜಾಗಿದ್ದರು. ವಿಷಯ ತಿಳಿದ ಭಾರಂಗಿ ಹೋಬಳಿಯ ರೈತ ಸಮೂಹ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ಸಂತೋಷ್, ಸಾಮಾಜಿಕ ಕಾರ್ಯಕರ್ತ ಮಂಜಯ್ಯ ಜೈನ್ ನೇತೃತ್ವದಲ್ಲಿ ಕೂಡಲೇ ಶರಾವತಿ ಹಿನ್ನೀರಿನ ಮುಪ್ಪಾನೆ ಕಡವು ಬಳಿ ಧಾವಿಸಿ ಲಾಂಚ್ ಏರಿ ಕುಳಿತು ಪ್ರತಿಭಟನೆಆರಂಭಿಸಿದರು.

‘ಮುಳುಗಡೆ ಸಂತ್ರಸ್ತರ ಹೋರಾಟದ ಫಲವಾಗಿ ದೊರೆತಿರುವ ಹೊಸ ಲಾಂಚ್ ಅನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಅಂತಿಮವಾಗಿ ಅಧಿಕಾರಿಗಳ ತಂಡ ಹಸಿರುಮಕ್ಕಿ ಹಿನ್ನೀರಿನಿಂದ ಎರವಲು ಸೇವೆಗಾಗಿ ಮುಪ್ಪಾನೆಯಲ್ಲಿದ್ದ ಹಳೆಯ ಲಾಂಚ್ ಅನ್ನು ಶಿಗ್ಗಲು ಕೋಗಾರ್ ಜಲಮಾರ್ಗಕ್ಕೆ ಸ್ಥಳಾಂತರಿಸಿ ತೃಪ್ತಿ ಪಡಬೇಕಾಯಿತು.

ADVERTISEMENT

‘ಮುಂದೆ ಇಂಥ ಘಟನೆಗಳು ಮರುಕಳಿಸಬಾರದು. ಎಲ್ಲವನ್ನೂ ನಾಡಿಗಾಗಿ ತ್ಯಾಗ ಮಾಡಿದ ರೈತರು ಹಿನ್ನೀರಿನ ದಡದಲ್ಲಿ ಗೊಂಡಾರಣ್ಯದಲ್ಲಿ ಯಾತನೆ ಅನುಭವಿಸುತ್ತಿದ್ದಾರೆ. ಅವರ ಪಾಲಿಗೆ ದೊರಕುವ ಅಲ್ಪ ಸಹಾಯಗಳನ್ನೂ ಕಿತ್ತುಕೊಳ್ಳುವ ಜಾಯಮಾನ ಮುಂದುವರಿದಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಮಂಜಯ್ಯ ಜೈನ್ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ಸಂತೋಷ್, ದೇವರಾಜ ಜೈನ್ ಯಡ್ಡಳ್ಳಿ, ಪದ್ಮ ಪ್ರಸಾದ್, ಸೋಮರಾಜ್, ನಾಗರಾಜ್ ವಾಟೇಮಕ್ಕಿ, ದಿನೇಶ್ ಆರೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.