ADVERTISEMENT

ಶಿಕಾರಿಪುರ: ಬರಿದಾಗಿದೆ ‘ಅಂಜನಾಪುರ’ದ ಒಡಲು

ಎಚ್.ಎಸ್.ರಘು
Published 22 ಜೂನ್ 2023, 6:53 IST
Last Updated 22 ಜೂನ್ 2023, 6:53 IST
ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ತಾಲ್ಲೂಕಿನ ಅಂಜನಾಪುರ ಜಲಾಶಯ ಬಹುತೇಕ ನೀರಿಲ್ಲದೆ ಬರಿದಾಗಿದೆ
ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ತಾಲ್ಲೂಕಿನ ಅಂಜನಾಪುರ ಜಲಾಶಯ ಬಹುತೇಕ ನೀರಿಲ್ಲದೆ ಬರಿದಾಗಿದೆ   

ಶಿಕಾರಿಪುರ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಅಂಜನಾಪುರ ಜಲಾಶಯ ನೀರಿಲ್ಲದೇ ಬರಿದಾಗಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.

ಶಿಕಾರಿಪುರ ತಾಲ್ಲೂಕು ಹಾಗೂ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸುರಿಯುವ ಮಳೆ ನೀರಿನಿಂದ ಭರ್ತಿಯಾಗುವ ಅಂಜನಾಪುರ ಜಲಾಶಯದ ನೀರಿನ ಸಂಗ್ರಹ ಮಟ್ಟ 1.8 ಟಿಎಂಸಿ ಅಡಿ ಇದ್ದು, ಪ್ರಸ್ತುತ ಸಮರ್ಪಕ ಮಳೆ ಬೀಳದ ಕಾರಣ ಜಲಾಶಯದ ನೀರು ಬತ್ತಿ ಹೋಗಿ ಜಲಾಶಯ ಬರಿದಾಗಿ ಡೆಡ್‌ಸ್ಟೋರೆಜ್ ಹಂತ ತಲುಪಿದೆ. ಜಲಾಶಯ ಬರಿದಾದ ಕಾರಣ ಪುರಸಭೆ ಎರಡು ಹಾಗೂ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ.

ಪಟ್ಟಣದ ಜನಸಂಖ್ಯೆ, ಶಾಲೆ, ಕಾಲೇಜುಗಳು, ವಿದ್ಯಾರ್ಥಿ ನಿಲಯ ಸೇರಿದಂತೆ ಒಟ್ಟು ದಿನಕ್ಕೆ 75 ಲಕ್ಷ ಲೀಟರ್ ಕುಡಿಯುವ ನೀರನ್ನು ಪುರಸಭೆ ಸರಬರಾಜು ಮಾಡುತ್ತಿತ್ತು. ಆದರೆ, ಜಲಾಶಯ ಬರಿದಾಗಿ
ನೀರು ತಳಮಟ್ಟ ಸೇರಿರುವುದರಿಂದ ಎರಡು ದಿನಗಳಿಗೊಮ್ಮೆ 50 ಲಕ್ಷ ಲೀಟರ್‌ ಜಲಾಶಯದಿಂದ
ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಉಳಿದಂತೆ 120 ಕೊಳವೆ ಬಾವಿಗಳ ಮೂಲಕ ಜನತೆಗೆ ನೀರು ಸರಬರಾಜು ಮಾಡುತ್ತಿದೆ.

ADVERTISEMENT
ಶಿಕಾರಿಪುರ ಪಟ್ಟಣದಲ್ಲಿ ಪುರಸಭೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು

ಪುರಸಭೆ ಎರಡು– ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸುತ್ತಿರುವುದರಿಂದ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ಕುಡಿಯುವ ನೀರು ಸಂಗ್ರಹಿಸುವುದಕ್ಕಾಗಿ ಹೆಚ್ಚು ಸಮಯ ಮೀಸಲಿಡುವಂತಾಗಿದೆ. ಕೆಲವು ಬಡಾವಣೆಗಳಲ್ಲಿ ಎರಡು, ಮೂರು ದಿನಕ್ಕೊಮ್ಮೆ ಸರಬರಾಜು ಮಾಡುವ ನೀರು ಕೂಡ ನಲ್ಲಿಯಲ್ಲಿ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪಗಳಿವೆ.

ನಲ್ಲಿಗಳಲ್ಲಿ ಸಮರ್ಪವಾಗಿ ನೀರು ಬಾರದ ಬಡಾವಣೆಗಳಿಗೆ ಪುರಸಭೆ ಟ್ಯಾಂಕರ್ ಮೂಲಕ ಪೂರೈಸುತ್ತಿದೆ. ಈ ನೀರು ಪಡೆಯಲು ಮಹಿಳೆಯರು ಮನೆ ಮುಂಭಾಗ ಪೈಪೋಟಿಗೆ ಬೀಳುವಂತಾಗಿದೆ. ಶೀಘ್ರವೇ ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬರದಿದ್ದರೆ, ಪಟ್ಟಣದ ಜನರು ಕುಡಿಯುವ ನೀರಿಗೆ ಪರಿತಪಿಸಬೇಕಾಗುತ್ತದೆ. ಈಗ ಜಲಾಶಯದಲ್ಲಿರುವ ನೀರನ್ನು ಎರಡು ದಿನಗಳಿಗೊಮ್ಮೆ
ನೀಡಿದರೂ 15 ದಿನ ಮಾತ್ರ ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯ ಅಚ್ಚುಕಟ್ಟು ರೈತರಲ್ಲೂ ಆತಂಕ

ತಾಲ್ಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದ ನೀರು ನಂಬಿಕೊಂಡು ಸುಮಾರು 9,900 ಹೆಕ್ಟೇರ್ ಭತ್ತ ಹಾಗೂ ಅಡಿಕೆ ಬೆಳೆ ಬೆಳೆದು ರೈತರು ಜೀವನ ಸಾಗಿಸುತ್ತಿದ್ದಾರೆ. ಜಲಾಶಯಗಳು ಬರಿದಾಗಿರುವುದು ಹಾಗೂ ಮಳೆ ಸಮರ್ಪವಾಗಿ ಸುರಿಯದ ಕಾರಣ ಅಚ್ಚುಕಟ್ಟು ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಮುಂಗಾರಿನಲ್ಲಿ ಅಂದಾಜು 20,000 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗುತ್ತದೆ. ಮಳೆ ಬಾರದ ಕಾರಣ ರೈತರು ಮೆಕ್ಕೆಜೋಳ ಬಿತ್ತನೆಯನ್ನೇ ಮಾಡಿಲ್ಲ. ಜಲಾಶಯ ಬತ್ತಿದ್ದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟವೂ ಕುಸಿದಿದ್ದು, ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಕೆಲವು ತೋಟದ ಮಾಲೀಕರು ಬೇರೆ ಕಡೆಯಿಂದ ಕೊಳವೆ ಬಾವಿ ನೀರನ್ನು ಟ್ಯಾಂಕರ್‌ ಮೂಕ ಬಾಡಿಗೆಗೆ ತಂದು ತೋಟಕ್ಕೆ ಹರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.