ADVERTISEMENT

ಕಂಸನಾಗಿದ್ದ ಕಾಗೋಡು ಭೀಷ್ಮ ಆಗಿದ್ದು ಯಾವಾಗ?: ಎಚ್. ಹಾಲಪ್ಪ ಹರತಾಳು ವ್ಯಂಗ್ಯ

ಗೋಪಾಲಕೃಷ್ಣ ಬೇಳೂರ್‌ಗೆ ಹಾಲಪ್ಪ ಟಾಂಗ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 5:13 IST
Last Updated 10 ಏಪ್ರಿಲ್ 2023, 5:13 IST
ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ವಿವಿಧ ಪಕ್ಷಗಳ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡರು.
ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ವಿವಿಧ ಪಕ್ಷಗಳ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡರು.   

ಸಾಗರ: ‘ಈ ಹಿಂದೆ ಕಾಗೋಡು ತಿಮ್ಮಪ್ಪ ಅವರನ್ನು ಕಂಸ ಎಂದು ಕರೆದವರೇ ಈಗ ಭೀಷ್ಮ ಎನ್ನುತ್ತಿದ್ದಾರೆ. ಕೆಲವರ ನಾಲಿಗೆ ಹೇಗೆ ಬೇಕಾದರೂ ಹೊರಳುತ್ತದೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಶಾಸಕ ಎಚ್. ಹಾಲಪ್ಪ ಹರತಾಳು ವ್ಯಂಗ್ಯವಾಡಿದರು.

ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

‘ಯಡಿಯೂರಪ್ಪ ಮತ್ತವರ ಮಕ್ಕಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದವರ ಬಾಯಲ್ಲಿ ಈಗ ಯಡಿಯೂರಪ್ಪ ಪುಣ್ಯಾತ್ಮ ಎಂಬ ಮಾತು ಕೇಳಿಬರುತ್ತಿರುವುದು ಸೋಜಿಗದ ಸಂಗತಿ’ ಎಂದು ಬೇಳೂರು ಹೆಸರು ಹೇಳದೆ ಟೀಕಿಸಿದರು.

ADVERTISEMENT

‘ಕಾಗೋಡು ತಿಮ್ಮಪ್ಪ ಅವರು ಭೀಷ್ಮ ಎಂಬುದು ನಿಜ. ಮಹಾಭಾರತದಲ್ಲಿ ಭೀಷ್ಮ ಕೌರವರ ಕಡೆ ಇದ್ದರೂ ಕೆಡುಕಿನ ಪರ ಪಕ್ಷಪಾತಿ ಆಗಿರಲಿಲ್ಲ. ಈ ಬಾರಿಯೂ ಕಾಗೋಡು ತಿಮ್ಮಪ್ಪ ಅವರು ಅಧರ್ಮವನ್ನು ಸಹಿಸದೆ ಕೌರವರ ನಾಶಕ್ಕೆ ಕಾರಣರಾದ ಭೀಷ್ಮನ ರೀತಿಯಲ್ಲೇ ಕೆಡುಕಿನ ನಾಶಕ್ಕೆ ಕಾರಣರಾಗುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಪರಿಭಾವಿತ ಅರಣ್ಯ, ಸಿಂಗಳೀಕ ಅಭಯಾರಣ್ಯ, ಅಂಬಾರಗುಡ್ಡದ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸೇರಿದಂತೆ ಈ ಭಾಗದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಎರಡು ಬಾರಿ ಶಾಸಕರಾದವರು ಯಾವುದೇ ಧ್ವನಿ ಎತ್ತಿಲ್ಲ. ಈ ಸಮಸ್ಯೆಗಳು ಸೃಷ್ಟಿಯಾಗಿದ್ದು ಮಾವ, ಅಳಿಯ (ಕಾಗೋಡು-ಬೇಳೂರು) ಆಡಳಿತ ಅವಧಿಯಲ್ಲೇ ಎಂಬುದನ್ನು ಸಾಕ್ಷಿ ಸಮೇತ ರುಜುವಾತು ಪಡಿಸಬಲ್ಲೆ’ ಎಂದು ಅವರು ಸವಾಲು ಹಾಕಿದರು.

ಬಿಜೆಪಿಯ ಪ್ರಮುಖರಾದ ಶಾಂತಪ್ಪ ಗೌಡ, ದೇವೇಂದ್ರಪ್ಪ ಯಲಕುಂದ್ಲಿ, ಅರುಣ್ ಕುಗ್ವೆ, ಹರೀಶ್ ಮೂಡಳ್ಳಿ, ಬಂಗಾರಪ್ಪ ಗೌತಮಪುರ, ಕಿರಣ್, ಲೋಹಿತ್, ಕಾನುಗೋಡು ಗಣಪತಿ, ಬಂಗಾರಪ್ಪ, ರವಿ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.