ADVERTISEMENT

ವನ್ಯಜೀವಿಗಳ ಸಂರಕ್ಷಣೆಯಿಂದ ಪರಿಸರ ಸಮತೋಲನ: ಎಸಿಎಫ್‌ ಯೋಗೇಶ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:05 IST
Last Updated 6 ಅಕ್ಟೋಬರ್ 2023, 16:05 IST
ಕಾರ್ಗಲ್ ಸಮೀಪದ ಸೀತಾಕಟ್ಟೆ ಸೇತುವೆಯಿಂದ ಶಿರೂರು ಕೆರೆಯವರೆಗೆ ಶುಕ್ರವಾರ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು
ಕಾರ್ಗಲ್ ಸಮೀಪದ ಸೀತಾಕಟ್ಟೆ ಸೇತುವೆಯಿಂದ ಶಿರೂರು ಕೆರೆಯವರೆಗೆ ಶುಕ್ರವಾರ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು   

ಕಾರ್ಗಲ್: ವನ್ಯಜೀವಿಗಳ ಉಳಿವಿನಿಂದ ಮಾತ್ರ ಪರಿಸರದ ಸಮತೋಲನ ಸಾಧ್ಯ ಎಂದು ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಅಭಿಮತ ವ್ಯಕ್ತಪಡಿಸಿದರು.

ಇಲ್ಲಿಗೆ ಸಮಿಪದ ಜೋಗ ಜಲಪಾತದ ಸೀತಾಕಟ್ಟೆ ಸೇತುವೆಯ ತಾಣದಲ್ಲಿ 69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

‘ವನ್ಯಜೀವಿಗಳ ಸಂತತಿಯಿಂದ ಜಲಮೂಲಗಳು, ಅರಣ್ಯ ಸಂಪತ್ತಿನ ಮೂಲಗಳು ವೃದ್ಧಿಸುತ್ತವೆ. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪ್ಲಾಸ್ಟಿಕ್ ಪೆಡಂಭೂತ ಅಡ್ಡಗಾಲು ಹಾಕಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ಸ್ವಚ್ಛತಾ ಆಂದೋಲನಗಳಲ್ಲಿ ನಾಗರಿಕ ಸಮಾಜ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ’ ಎಂದು ಅವರು ತಿಳಿಸಿದರು.

ADVERTISEMENT

ಕಾರ್ಗಲ್ ಪ್ರಾದೇಶಿಕ ಅರಣ್ಯ, ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯ ಮತ್ತು ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಜೋಗದ ಸೀತಾಕಟ್ಟೆ ಸೇತುವೆಯಿಂದ, ಶಿರೂರು ಕೆರೆಯ ಏರಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಹರಡಿದ್ದ ಪ್ಲಾಸ್ಟಿಕ್ ಬಾಟಲಿ, ಕೊಟ್ಟೆ, ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.

ಪ್ರಾದೇಶಿಕ ವಲಯಾರಣ್ಯಾಧಿಕಾರಿ ರಾಘವೇಂದ್ರ ಎಂ. ಅಗಸೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ. ಮಂಜುನಾಥ, ಜಯಲಕ್ಷ್ಮೀ, ಲಕ್ಷ್ಮೀ ರಾಜು, ಉಪ ವಲಯಾರಣ್ಯಾಧಿಕಾರಿ ಮೈಲಾರಪ್ಪ, ಪ್ರಮೋದ್, ಇರ್ಫಾನ್, ರಾಘವೇಂದ್ರ, ಪ್ರಶಾಂತ್, ಆರೋಗ್ಯ ನಿರೀಕ್ಷಕ ಚಂದ್ರಶೇಖರ್, ಪೌರ ಕಾರ್ಮಿಕ ರವಿ ಇನ್ನಿತರರು ಸ್ವಚ್ಛತಾ ಆಂದೋಲನದ ಮೇಲುಸ್ತುವಾರಿ ವಹಿಸಿದ್ದರು.

ಕಾರ್ಗಲ್ ಸಮೀಪದ ಸೀತಾಕಟ್ಟೆ ಸೇತುವೆಯಿಂದ ಶಿರೂರು ಕೆರೆಯವರೆಗೆ ಶುಕ್ರವಾರ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.