ADVERTISEMENT

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಹಿಳೆಯರು ತತ್ತರ: ಪ್ರಫುಲ್ಲಾ

ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:25 IST
Last Updated 6 ಡಿಸೆಂಬರ್ 2021, 5:25 IST
ಪ್ರಫುಲ್ಲಾ ಮಧುಕರ್
ಪ್ರಫುಲ್ಲಾ ಮಧುಕರ್   

ಸಾಗರ: ಅಡುಗೆ ಅನಿಲ, ಅಡುಗೆ ಎಣ್ಣೆ, ಪೆಟ್ರೋಲ್, ಡಿಸೇಲ್ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ಬರಲಿರುವ ವಿಧಾನ ಪರಿಷತ್ ಚುನಾವಣೆ ಉತ್ತಮ ಸಂದರ್ಭವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಲೆ ಏರಿಕೆ ಯಿಂದಾಗಿ ಮಹಿಳೆಯರು ತತ್ತರಿಸಿ ಹೋಗಿದ್ದಾರೆ. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೆಲೆ ಏರಿಕೆ ವಿಷಯವನ್ನೇ ಪ್ರಧಾನ ವಾಗಿಟ್ಟುಕೊಂಡು ಮಹಿಳಾ ವರ್ಗದವರಲ್ಲಿ ಪ್ರಚಾರ ಮಾಡಿದ ಫಲವಾಗಿ ಬಿಜೆಪಿಗೆ ಸೋಲು ಉಂಟಾಗಿತ್ತು. ಅದೇ ಮಾದರಿಯನ್ನು ವಿಧಾನ ಪರಿಷತ್ ಚುನಾವಣೆಯಲ್ಲೂ ಅನುಸರಿಸಲಾಗುತ್ತಿದೆ’ ಎಂದರು.

‘ಈ ಹಿಂದೆ ಒಂದು ಅಡುಗೆ ಅನಿಲ ಬೆಲೆ ₹10 ದರ ಏರಿಕೆಯಾದಾಗ ಬಿಜೆಪಿ ಮುಖಂಡರಾದ ಶೋಭಾ ಕರದ್ಲಾಂಜೆ ಅವರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಈಗ ಸಿಲಿಂಡರ್‌ ಬೆಲೆ ವಿಪರೀತವಾಗಿ ಏರಿದ್ದರೂ ಅವರು ಮೌನ ವಹಿಸಿರುವುದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ, ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಆಡಳಿತ ಇಲ್ಲದೆ ಇರುವುದರಿಂದ ಕಿಶೋರಿಯರಿಗೆ ಪೌಷ್ಟಿಕ ಆಹಾರ, ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಅಕಾಲಿಕ ಮಳೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರ ಬಗ್ಗೆ ಬಿಜೆಪಿ ಸರ್ಕಾರ ನಿರ್ಲಕ್ಷ್ಯಧೋರಣೆ ತಾಳಿದೆ’ ಎಂದು ಆರೋಪಿಸಿದರು.

ಗಣಪತಿ ಬ್ಯಾಂಕ್ ನಿರ್ದೇಶಕಿ ಸರಸ್ವತಿ ನಾಗರಾಜ್, ‘ಬೆಲೆ ಏರಿಕೆ ಯಿಂದಾಗಿ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೃಷಿ ಕಾಯ್ದೆ ಜಾರಿಗೆ ತರುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸದೆ ರೈತರ ಸಾವಿನ ನಂತರ ಕಾಯ್ದೆಯನ್ನು ಹಿಂದಕ್ಕೆ ಪಡೆದಿದ್ದು, ಸರ್ಕಾರದ ದೂರದೃಷ್ಟಿಯ ಕೊರತೆಗೆ ಸಾಕ್ಷಿಯಾಗಿದೆ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ನಂದಾ ಗೊಜನೂರು, ‘ನಗರವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗಿದ್ದರೂ ನಗರಸಭೆ ವತಿಯಿಂದ ಜನರಿಗೆ ಕುಡಿಯುವ ನೀರಿನ ಪೂರೈಕೆ ಸಮರ್ಪ ಕವಾಗಿ ಆಗುತ್ತಿಲ್ಲ. ನಗರಸಭೆ ಅಧ್ಯಕ್ಷರು ಮಹಿಳೆಯಾಗಿರುವುದರಿಂದ ಅವರಿಗೆ ಉಳಿದವರಿಂದ ಸೂಕ್ತ ಸಹಕಾರ ದೊರಕುತ್ತಿಲ್ಲ’ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸಿರಿಜಾನ್, ಲಲಿತಮ್ಮ, ನಗರಸಭೆ ಸದಸ್ಯೆ ನಾಗರತ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.