ADVERTISEMENT

ಸೊರಬ: ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 6:30 IST
Last Updated 23 ಅಕ್ಟೋಬರ್ 2021, 6:30 IST
ಸೊರಬದ ಪುರಸಭೆ ಕಾರ್ಯಾಲಯದಲ್ಲಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಉಮೇಶ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು
ಸೊರಬದ ಪುರಸಭೆ ಕಾರ್ಯಾಲಯದಲ್ಲಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಉಮೇಶ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು   

ಸೊರಬ: ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಎಂಜಿನಿಯರ್ ಅವರನ್ನು ಸದಸ್ಯ ಎಂ.ಡಿ. ಉಮೇಶ್ ತರಾಟೆಗೆ ತಗೆದುಕೊಂಡರು.

ಪುರಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‌‌ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, 15ನೇ ಹಣಕಾಸು ಯೋಜನೆಯಡಿ ನಿಗದಿಗೊಳಿಸಲಾದ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸುವಂತೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಎಂ.ಡಿ. ಉಮೇಶ್, ‘ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಗಳು ವಿಳಂಬವಾಗುತ್ತಿವೆ. 2ನೇ ವಾರ್ಡ್‌ನಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ವರ್ಷಗಳೇ ಉರುಳಿವೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಗುತ್ತಿಗೆದಾರರ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಬೇಕಾದ ಎಂಜಿನಿಯರ್‌ ಮೌನವಹಿಸಿದ್ದಾರೆ’ ಎಂದು ದೂರಿದರು.

ಇದಕ್ಕೆ ಸದಸ್ಯರಾದ ವೀರೇಶ್ ಮೇಸ್ತ್ರೀ, ಅನ್ಸರ್ ಆಹ್ಮದ್ ಧ್ವನಿಗೂಡಿಸಿದರು.

ವೀರೇಶ್ ಮೇಸ್ತ್ರಿ ಮಾತನಾಡಿ, ‘ಆಶ್ರಯ ಬಡಾವಣೆಯಲ್ಲಿ ಖಾಲಿ ನಿವೇಶನಗಳಲ್ಲಿ ಗಿಡಗಳು ಬೆಳೆದು ವಿಷಜಂತುಗಳ ವಾಸಸ್ಥಾನವಾಗಿದೆ. ಕೆಲ ಉಳ್ಳವರು ನಿವೇಶನಗಳನ್ನು ಪಡೆದಿದ್ದು, ಮಾರಾಟ ಮಾಡುವ ಉದ್ದೇಶದಿಂದ ಮನೆ ನಿರ್ಮಿಸಿಕೊಂಡಿಲ್ಲ. ಅವುಗಳನ್ನು ಪುರಸಭೆ ವಶಕ್ಕೆ ಪಡೆಯಬೇಕು. ಅರ್ಹರಿಗೆ ನೀಡುವ ಜೊತೆಗೆ ಸ್ವಚ್ಛತೆ ಕಾಪಾಡಬೇಕು’ ಎಂದು ಒತ್ತಾಯಿಸಿದರು.

ಹಳೇ ಮಾರುಕಟ್ಟೆ ಸೇರಿ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಮರ್ಪಕವಾಗಿ ಬೀದಿಗಳ ನಿರ್ವಹಣೆಯಾಗುತ್ತಿಲ್ಲ. ಚರಂಡಿಗಳಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿಯೂ ತಾರತಮ್ಯ ಎಸಗಲಾಗುತ್ತಿದೆ ಎಂದು ಸದಸ್ಯರು ದೂರಿದರು.

ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ‘ಮುಂದಿನ ಸಭೆಯೊಳಗೆ 2ನೇ ವಾರ್ಡ್‌ ರಸ್ತೆ ಕಾಮಗಾರಿಯ ಸಂಪೂರ್ಣ ವರದಿಯನ್ನು ಸಭೆಯ ಮುಂದಿಡುವಂತೆ ಅಧಿಕಾರಿಗಳಿಗೆ
ಸೂಚಿಸಿದರು.

15ನೇ ಹಣಕಾಸು ಯೋಜನೆಯ ಅನುದಾನವನ್ನು ಕುಡಿಯುವ ನೀರು ಪೂರೈಕೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಬಳಕೆ ಮಾಡಬೇಕು. ಬೀದಿ ದೀಪಗಳ ವಾರ್ಷಿಕ ನಿರ್ವಹಣೆ ಮತ್ತು ಹೊರಗುತ್ತಿಗೆ ಮಾನವ ಸಂಪನ್ಮೂಲ ಟೆಂಡರ್‌ ಅನ್ನು ಮುಂದುವರಿಸಲು ಸದಸ್ಯರು ಒಪ್ಪಿಗೆ ಸೂಚಿಸಿದರು.

ಸದಸ್ಯರಾದ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಪ್ರೇಮಾ, ಯು. ನಟರಾಜ್, ಜಯಲಕ್ಷ್ಮೀ, ಆಫ್ರಿನ್‌, ಪ್ರಭು ಮೇಸ್ತ್ರಿ, ಮುಖ್ಯಾಧಿಕಾರಿ ಬಿ. ಮಹೇಂದ್ರ, ಎಂಜಿನಿಯರ್‌ ಶೆಲ್ಜಾ, ಕಂದಾಯ ಅಧಿಕಾರಿ ವಿನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.