ADVERTISEMENT

ಯುವ ಉದ್ಯಮಿಯ ಕೃಷಿ ಪ್ರೀತಿ- ತಾತ್ಸಾರಗಳನ್ನು ಮೆಟ್ಟಿ ನಿಂತ ಸುಕೇಶ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 6:03 IST
Last Updated 6 ಅಕ್ಟೋಬರ್ 2021, 6:03 IST
ಸುಕೇಶ್ ಅವರ ಜಮೀನಿನಲ್ಲಿ ಹುಲುಸಾಗಿ ಬೆಳೆದ ಅಡಿಕೆ ಗಿಡಗಳು
ಸುಕೇಶ್ ಅವರ ಜಮೀನಿನಲ್ಲಿ ಹುಲುಸಾಗಿ ಬೆಳೆದ ಅಡಿಕೆ ಗಿಡಗಳು   

ಕೋಣಂದೂರು: ಬಾಲ್ಯದಲ್ಲಿ ಕಾಡಿದ ಬಡತನ, ಅಕ್ಕಪಕ್ಕದವರ ತಾತ್ಸಾರಗಳನ್ನು ಮೆಟ್ಟಿನಿಂತು ಕಿರಿಯ ವಯಸ್ಸಿನಲ್ಲಿಯೇ ಕೃಷಿಯಲ್ಲಿ ಸಾಧನೆ ಮಾಡಿದವರು ಸುಕೇಶ್.

ಮನೆಯಿಂದ ಹೊರಬಂದ ಸುಕೇಶ್, ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ತಮ್ಮ ಹರ್ಬಲ್ ಕಾನ್ಸೆಪ್ಟ್ ಉದ್ಯಮ ಇದೀಗ ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ಹೆಸರು ಮಾಡುತ್ತಿದೆ. ಅವರ ಬಿಡುವಿರದ ದಿನಚರಿಯ ನಡುವೆಯೂ ಕೃಷಿ ಕಾಯಕದಲ್ಲಿ ಅಷ್ಟೇ ಆಸಕ್ತಿಯಿಂದ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಮೂಲತಃವಡ್ಡೀಗದ್ದೆ ಹಾರಂಬಳ್ಳಿಯ ಸುಕೇಶ್, ಸ್ವಂತ ಊರಿನಲ್ಲಿ 5 ಎಕರೆ ಕೃಷಿ ಜಮೀನಿನಲ್ಲಿ ನವೀನ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಹೊಸದಾಗಿ ಕೋಣಂದೂರು ಸಮೀಪದ ಪುಟ್ಟಗುಡ್ಡೆಯಲ್ಲಿ ಸುಮಾರು 25 ಎಕರೆ ಕೃಷಿ ಜಮೀನು ಖರೀದಿಸಿ ಭತ್ತ, ಅಡಿಕೆ, ತೆಂಗು, ಕಾಳು ಮೆಣಸು ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ADVERTISEMENT

ಜಮೀನಿನಲ್ಲಿ ನೀರಿಗಾಗಿ 5 ಕೊಳವೆ ಬಾವಿ, 2 ಕೆರೆ ಹಾಗೂ 2 ತೆರೆದ ಬಾವಿಗಳನ್ನು ನಿರ್ಮಿಸಿಕೊಂಡಿದ್ದಾರೆ. ತುಂತುರು ಹಾಗೂ
ಹನಿ ನೀರಾವರಿ ಮೂಲಕ ಜಮೀನಿಗೆ ನೀರು ಹಾಯಿಸುತ್ತಾರೆ. ಕೃಷಿ ಜಮೀನಿನ ಮುತುವರ್ಜಿಗಾಗಿ ಆಳುಗಳನ್ನು ನಿಯೋಜಿಸಿದ್ದರೂ ಬಿಡುವಿನ ವೇಳೆಯನ್ನು ತಮ್ಮ ಕೃಷಿ ಜಮೀನಿನಲ್ಲಿಯೇ ಕಳೆಯುವುದು ಅವರಿಗಿರುವ ಕೃಷಿ ನಿಷ್ಠೆಯನ್ನು ಪ್ರದರ್ಶಿಸುತ್ತದೆ.

ಜಾನುವಾರು ಸಾಕಣೆಗಾಗಿಅತ್ಯಾಧುನಿಕ ಕೊಠಡಿ ನಿರ್ಮಿಸಿರುವ ಅವರು ದೇಶೀಯ ತಳಿಯ ಜಾನುವಾರನ್ನು ಸಾಕುತ್ತಿದ್ದಾರೆ. ಕೋಳಿ ಸಾಕಣೆ, ಹವ್ಯಾಸಕ್ಕಾಗಿ ಒಂದು ಕುದುರೆಯನ್ನೂ ಸಾಕಿಸೈ ಎನಿಸಿಕೊಂಡವರು. ಉಪ ಬೆಳೆಗಳನ್ನು ವಿವಿಧ ಜಾತಿಯ ಹಣ್ಣಿನ, ಆಲಂಕಾರಿಕ ಸಸ್ಯ, ಗಿಡಮೂಲಿಕೆ ಸಸ್ಯಗಳನ್ನು ತಮ್ಮ ಕೃಷಿ ಜಮೀನಿನಲ್ಲಿ ನೆಟ್ಟು ಖುಷಿ ಕಾಣುತ್ತಿದ್ದಾರೆ.

ಕುರಿ, ಮೊಲ, ಕೆಲವೊಂದು ಕಾಡು ಪಕ್ಷಿಗಳನ್ನು ತಂದು ಸಾಕುವ ಮೂಲಕ ಜಮೀನನ್ನು ಒಂದು ರಮಣೀಯ ತಾಣವಾಗಿಸುವ ಯೋಜನೆ ಹೊಂದಿರುವ ಇವರು ನೈಸರ್ಗಿಕ ಪರಿಸರಮತ್ತು ಜಲ ಮೂಲಗಳ ರಕ್ಷಣೆ ಮಾಡುತ್ತಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಬಿಡುವಿನ ವೇಳೆಯ ಸಂಪೂರ್ಣ ಸದುಪಯೋಗ ಮಾಡಿಕೊಂಡಿದ್ದೇನೆ. ಜಮೀನಿಗೆ ಬೇಕಾಗಿರುವ ಮಣ್ಣು ಹಾಕಿಸಿ ಸಮತಟ್ಟುಗೊಳಿಸಲು ಸಮಯ ಕೂಡಿ ಬಂತು’ ಎನ್ನುತ್ತಾರೆ ಸುಕೇಶ್.

ತಾಯಿ, ಪತ್ನಿಯ ಕೋರಿಕೆಯನ್ನು ಪುರಸ್ಕರಿಸಿ ತಾವೂ ಕೃಷಿಯಲ್ಲಿ ಹೊಸತನ್ನು ಹುಡುಕ ಹೊರಟಿರುವ ಉದ್ಯಮಿ ಸುಕೇಶ್, ಅತ್ಯಂತ ಕಡಿಮೆ ವೇತನಕ್ಕೆ ಪಟ್ಟಣ ಸೇರುವ ಅದೆಷ್ಟೋ ವಿದ್ಯಾವಂತ ನಿರುದ್ಯೋಗಿಗಳಿಗೆ ಆದರ್ಶಪ್ರಾಯರಾಗಿ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.